ಜಾರ್ಖಂಡ್: ಕನ್ವರ್ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಹಾಗೂ ಟ್ರಕ್ ನಡುವೆ ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು 18 ಮಂದಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನ ದಿಯೋಘರ್ನಲ್ಲಿ ಸಂಭವಿಸಿದೆ.
ಮಂಗಳವಾರ ಬೆಳಗಿನ ಜಾವ 4.30ರ ಸುಮಾರಿಗೆ ಮೋಹನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಮುನಿಯಾ ಪ್ರದೇಶದಲ್ಲಿ ಕನ್ವಾರಿಯರನ್ನು ಕರೆದೊಯ್ಯುತ್ತಿದ್ದ ಬಸ್ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್‌ಗೆ ಡಿಕ್ಕಿಯಾಗಿದ್ದು ಅವಘಡ ಸಂಭವಿಸಿದೆ. ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನು ಈ ಬಗ್ಗೆ ದಿಯೋಘರ್‌ನ ಎಸ್‌ಡಿಒ ಸದರ್ ರವಿ ಕುಮಾರ್ ಮಾಹಿತಿ ನೀಡಿದ್ದು, ಬೆಳಿಗ್ಗೆ 4-5 ಗಂಟೆ ಸುಮಾರಿಗೆ ಅಪಘಾತ ವರದಿಯಾಗಿದೆ. ದಿಯೋಘರ್‌ನಿಂದ ಬಾಸುಕಿನಾಥ್ ದರ್ಶನಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್‌ನ ಚಾಲಕನ ನಿಯಂತ್ರಣ ತಪ್ಪಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತದೇಹಗಳನ್ನು ಸದರ್ ಆಸ್ಪತ್ರೆಗೆ ತರಲಾಗಿದೆ. 23 ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ದಿಯೋಘರ್‌ನ ಉಪ ಆಯುಕ್ತರು ಗಾಯಾಳುಗಳಲ್ಲಿ ಒಂಬತ್ತು ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ದಿಯೋಘರ್‌ನ ಏಮ್ಸ್‌ಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.


