ಬೆಂಗಳೂರು: ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರವು ಮಹಿಳಾ ಸಬಲೀಕರಣಕ್ಕೆ ಕಳೆದ 10 ವರ್ಷಗಳಲ್ಲಿ ಗರಿಷ್ಠ ಆದ್ಯತೆ ಕೊಟ್ಟಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಹೇಳಿದರು.
ಶೇ. 33ರಷ್ಟು ಮಹಿಳಾ ಮೀಸಲಾತಿ, ತ್ರಿವಳಿ ತಲಾಖ್ ರದ್ದು, ಮಹಿಳಾ ಅತ್ಯಾಚಾರ ಮಾಡಿದ ಅಪರಾಧಿಗೆ ಗಲ್ಲು ಶಿಕ್ಷೆ ಸೇರಿ ಅನೇಕ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಮಹಿಳಾ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕೊಡಲಾಗಿದೆ. ಶೇ 61 ಮಹಿಳೆಯರು ಆ ಯೋಜನೆಯ ಪ್ರತಿಫಲ ಪಡೆದಿದ್ದಾರೆ ಎಂದು ವಿವರಿಸಿದರು.
ಶೇ 45 ಮಹಿಳೆಯರು ಸ್ಟಾಂಡ್ ಅಪ್ ಯೋಜನೆಯ ಲಾಭ ಪಡೆದಿದ್ದಾರೆ. ಜನ್ ಧನ್ ಯೋಜನೆಯಡಿ 2014ರ ಹಿಂದೆ ಯುಪಿಎ ಆಡಳಿತ ಇದ್ದಾಗ 10.3 ಕೋಟಿ ಬ್ಯಾಂಕ್ ಖಾತೆಗಳಿದ್ದವು. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕಳೆದ 10 ವರ್ಷಗಳಲ್ಲಿ 51.6 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ 28 ಕೋಟಿ ಮಹಿಳಾ ಖಾತೆಗಳಿವೆ ಎಂದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶೇ 70ರಷ್ಟು ಮನೆಗಳನ್ನು ಮಹಿಳೆಯರಿಗೇ ಕೊಡಲಾಗುತ್ತಿದೆ. ವಿಶ್ವಕರ್ಮ ಯೋಜನೆಯಲ್ಲಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಭಾಗಿದಾರರಾಗಿದ್ದಾರೆ. ವಿಶ್ವಕರ್ಮ ಯೋಜನೆಯ ನೋಂದಣಿಯಲ್ಲಿ ನಮ್ಮ ಕರ್ನಾಟಕ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ಸೂಚಿಸಿದರು.
ಜನೌಷಧಿ ಕೇಂದ್ರಗಳಿಂದ ಮಹಿಳೆಯರು ದೊಡ್ಡ ಪ್ರಮಾಣದ ಪ್ರಯೋಜನ ಪಡೆಯುತ್ತಿದ್ದಾರೆ. ಅದರಲ್ಲೂ ಕರ್ನಾಟಕವು ಜನೌಷಧಿ ಕೇಂದ್ರಗಳಲ್ಲಿ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯು ಸಣ್ಣ ಮತ್ತು ಅತಿಸಣ್ಣ ಉದ್ಯಮಿಗಳು ಮೀಟರ್ ಬಡ್ಡಿ ಕಟ್ಟುವುದನ್ನು ತಪ್ಪಿಸಲು ಪ್ರಯೋಜನ ನೀಡಿದೆ. ಇದರಡಿ 10 ಸಾವಿರದಿಂದ 50 ಸಾವಿರದವರೆಗೆ ಪ್ರಯೋಜನ ಸಿಕ್ಕಿದೆ ಎಂದು ತಿಳಿಸಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ 1,800 ಕೋಟಿ ರೂ. ಸಾಲವನ್ನು ನರೇಂದ್ರ ಮೋದಿಯವರು ಕೊಟ್ಟಿದ್ದಾರೆ. ಈ ರೀತಿ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಒತ್ತನ್ನು ಕೊಟ್ಟ ಪರಿಣಾಮವಾಗಿ ಬಡತನ ರೇಖೆಗಿಂತ ಕೆಳಗಿದ್ದ ಜನರಲ್ಲಿ ಶೇ 50ರಷ್ಟು ಜನರು ಈ ರೇಖೆಯಿಂದ ಮೇಲೆ ಬಂದುದನ್ನು ಕಾಣಬಹುದು. ರಾಜ್ಯದಲ್ಲಿ ಉಜ್ವಲ ಯೋಜನೆಯಡಿ 35.57 ಲಕ್ಷ ಗ್ಯಾಸ್ ಸಂಪರ್ಕವನ್ನು ಕೊಟ್ಟಿದ್ದೇವೆ. ಜಲ ಜೀವನ್‍ನಡಿ ಶೇ 24ರಷ್ಟು ಮನೆಗಳಿಗೆ ಮಾತ್ರ ಈ ಹಿಂದೆ ನಳ್ಳಿ ನೀರಿನ ಸೌಕರ್ಯವಿತ್ತು. ಅದನ್ನು ನಾವು ಶೇ 50 ಮೀರಿಸಿದ್ದೇವೆ. ಕರ್ನಾಟಕದಲ್ಲಿ 70.12 ಲಕ್ಷ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಕೊಟ್ಟಿದ್ದಾಗಿ ಹೇಳಿದರು.
ಶೌಚಾಲಯ ಎಂಬುದು ಮಹಿಳೆಯ ಗೌರವ- ಘನತೆಯ ಪ್ರಶ್ನೆ. ಇಡೀ ದೇಶದಲ್ಲಿ 11.74 ಕೋಟಿ ಮತ್ತು ಕರ್ನಾಟಕದಲ್ಲಿ 48 ಲಕ್ಷಕ್ಕಿಂತ ಹೆಚ್ಚು ಶೌಚಾಲಯಗಳ ನಿರ್ಮಾಣವಾಗಿದೆ ಎಂದು ವಿವರ ನೀಡಿದರು. ಹಿಂದೆ ಮಹಿಳೆಯರಿಗೆ 12 ವಾರ ಹೆರಿಗೆ ರಜಾ ಕೊಡಲಾಗುತ್ತಿತ್ತು. ಇವತ್ತು 26 ವಾರ ಹೆರಿಗೆ ರಜೆ ಕೊಡಲಾಗುತ್ತಿದೆ ಎಂದು ತಿಳಿಸಿದರು.
‘ಮಾತೃವಂದನಾ’ ಎಂಬುದು ಮುಂದಾಲೋಚನೆಯೊಂದಿಗೆ ಮಾಡಿದ ಅಭೂತಪೂರ್ವ ಕಾರ್ಯಕ್ರಮ. ಗರ್ಭಿಣಿಯಾದಾಗ 1 ಸಾವಿರ, ಹೆರಿಗೆಗೆ ಹೋದಾಗ 2 ಸಾವಿರ, ಅಲ್ಲದೆ ಹೆರಿಗೆ ಬಳಿಕ 2 ಸಾವಿರ, ಜೊತೆಗೇ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ್ ಎಂಬುದು ವಿಶ್ವದ ಅತಿ ದೊಡ್ಡ ವಿಮಾ ಯೋಜನೆ. ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ ಎಂದರು.
ಕೊಲೆ, ದರೋಡೆ, ಅಪರಾಧ ಹೆಚ್ಚಳ:
ಕರ್ನಾಟಕವು ಮಹಿಳೆಯರ ಸುರಕ್ಷತೆಯಲ್ಲಿ ಹಿಂದುಳಿದಿದೆ. 1.80 ಲಕ್ಷ ಆರ್ಥಿಕ ಅಪರಾಧಗಳು ರಾಜ್ಯದಲ್ಲಿ ನಡೆದಿವೆ. ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಯಾವುದೇ ರಕ್ಷಣೆ ಸಿಗುತ್ತಿಲ್ಲ ಎಂದು ಶ್ರೀಮತಿ ಭಾರತಿ ಶೆಟ್ಟಿ ಅವರು ಆತಂಕ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಕಳೆದ ಒಂದು ವರ್ಷದಲ್ಲಿ ಕೊಲೆಗಳು ಶೇ 31ರಷ್ಟು ಜಾಸ್ತಿ ಆಗಿವೆ. ದರೋಡೆ ಶೇ 41ರಷ್ಟು ಜಾಸ್ತಿ ಆಗಿದೆ ಎಂದು ವಿವರಿಸಿದರು.
ಕೇಂದ್ರವು ಕೋವಿಡ್ ಸಂದರ್ಭದಲ್ಲಿ 10 ಕೆಜಿ ಅಕ್ಕಿ, ಉಚಿತ ಕೋವಿಡ್ ಲಸಿಕೆ ನೀಡಿದ್ದು, ಬಿಪಿಎಲ್- ಎಪಿಎಲ್ ಎಂದು ನೋಡದೆ 29 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಇದು ಶ್ಲಾಘನೀಯ. ಕರ್ನಾಟಕದಲ್ಲಿ ಶೇ 50ಕ್ಕಿಂತ ಹೆಚ್ಚು ಮಹಿಳಾ ಮತದಾರರಿದ್ದಾರೆ. ಕಾಂಗ್ರೆಸ್ ಸರಕಾರವು ಅಭಿವೃದ್ಧಿಯ ಚಿಂತನೆ ಮಾಡದೆ ಗ್ಯಾರಂಟಿಗಳನ್ನು ನೀಡಿದೆ. ಆದರೆ, ಜನರಿಗೆ ಬದುಕುವ ದಾರಿ ಕಲ್ಪಿಸುವ ಯೋಜನೆಗಳನ್ನು ಕೇಂದ್ರ ಸರಕಾರ ಕೊಟ್ಟಿದೆ ಎಂದು ನುಡಿದರು. ರಾಜ್ಯ ಸರಕಾರ ಮೀನು ತಿನಿಸುವಂಥ ಮಾದರಿಯ ಯೋಜನೆ ಕೊಟ್ಟರೆ, ಕೇಂದ್ರ ಸರಕಾರ ಮೀನು ಹಿಡಿದು ತಿಂದು ಬದುಕುವ ಮಾದರಿಯ ಯೋಜನೆಗಳನ್ನು ನೀಡಿದೆ ಎಂದು ವಿಶ್ಲೇಷಿಸಿದರು.