ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದಿನಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇವತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್ ಪರ ಮತಯಾಚನೆ ಮಾಡಲಿದ್ದಾರೆ.
ಶಿಗ್ಗಾಂವಿಯಲ್ಲಿ ಎರಡು ದಿನ ಸಿಎಂ ಪ್ರಚಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಹುಬ್ಬಳ್ಳಿ ಮೂಲಕ ಶಿಗ್ಗಾಂವಿ ತಲುಪಲಿದ್ದಾರೆ. ಬಳಿಕ ಶಿಗ್ಗಾಂವಿ ತಾಲೂಕಿನ ಹುಲಗೂರಿನಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಹುರಳಿಕುಪ್ಪಿ ಗ್ರಾಮ, ಸಂಜೆ 6 ಗಂಟೆಗೆ ಬಂಕಾಪುರ ಪಟ್ಟಣದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ರಾತ್ರಿ ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಿ ಮಂಗಳವಾರ ಬೆಳಗ್ಗೆ 10.45ಕ್ಕೆ ಚಂದಾಪುರದಲ್ಲಿ ಶಿಗ್ಗಾಂವಿಯ ಚುನಾವಣಾ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಪರ ಮತ ಯಾಚಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಹಿರೇಬೆಂಡಿಗೇರಿಯಲ್ಲಿ ಹಾಗೂ ಸಂಜೆ 6 ಗಂಟೆಗೆ ಚಿಲ್ಲೂರಬಡ್ಡಿಯಲ್ಲಿ ಪ್ರಚಾರ ನಡೆಸಲಿದ್ದು, ಬಳಿಕ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ವಿಮಾನದಲ್ಲಿ ವಾಪಸಾಗಲಿದ್ದಾರೆ.
ಡಿಸಿಎಂ ಚನ್ನಪಟ್ಟಣದಲ್ಲಿ ಪ್ರಚಾರ: ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಬೆಳಿಗ್ಗೆ 11 ರಿಂದ 11.30 ವರೆಗೆ ಚನ್ನಪಟ್ಟಣದ ಹೊಂಗನೂರು, ಬಳಿಕ ವಿರೂಪಾಕ್ಷಿಪುರ, ಕೋಡಂಬಳ್ಳಿ, ಅಕ್ಕೂರು, ಚನ್ನಪಟ್ಟಣ ಟೌನ್ ಮತ್ತು ಮಂಗಳವಾರ ಪೇಟೆ ಮತ್ತು ಕೋಟೆಯಲ್ಲಿ ದಿನವಿಡೀ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.