ಲಕ್ನೋ : ಹೊಸ ವರ್ಷ ಎಲ್ಲರ ಜೀವನದಲ್ಲೂ ಸಂತಸ ಉಂಟುಮಾಡಬೇಕು. ಆದರೆ, ಆಗ್ರಾ ಮೂಲದ ಮನೆಯಲ್ಲಿ ಇಂದು ಸೂತಕ ಆವರಿಸಿದೆ. ನಿನ್ನೆ ರಾತ್ರಿ ಹೊಸ ವರ್ಷಾಚರಣೆಗೆ ತನ್ನ ತಾಯಿ ಮತ್ತು ನಾಲ್ವರು ತಂಗಿಯರನ್ನು ಹೋಟೆಲ್ಗೆ ಯುವಕನೊಬ್ಬ ಕರೆದುಕೊಂಡು ಹೋಗಿದ್ದ. ಅವರೆಲ್ಲರೂ ಫ್ಯಾಮಿಲಿ ಒಟ್ಟಿಗೇ ಹೊಸ ವರ್ಷವನ್ನು ಆಚರಿಸಿ ಸಂಭ್ರಮಿಸುವ ಖುಷಿಯಲ್ಲಿದ್ದರು. ಆದರೆ, ಯಾರೂ ಊಹಿಸದ ರೀತಿ ಆ ಯುವಕ ತನ್ನ ಮನೆಯವರನ್ನೆಲ್ಲ ಹೋಟೆಲ್ ರೂಂನಲ್ಲೇ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಅರ್ಷದ್ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ತಾನು ಮಾಡಿದ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾನೆ. ಆಗ್ರಾದಲ್ಲಿನ ತಮ್ಮ ಆಸ್ತಿಯನ್ನು ನೆರೆಹೊರೆಯವರು ಕಬಳಿಸಲು ನೋಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ತನ್ನ ಸಹೋದರಿಯರನ್ನು ಮಾರಾಟ ಮಾಡಲು ಯೋಜಿಸಿದ್ದಾರೆ. ಆದರೆ, ನನ್ನ ಮನೆಯವರು ಈ ಎಲ್ಲ ಅವಮಾನ, ಕಷ್ಟ ಎದುರಿಸುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ, ಈ ಎಲ್ಲ ಸಮಸ್ಯೆಗಳಿಂದ ಮುಕ್ತರಾಗಲು ತಾನೇ ತನ್ನ ಮನೆಯವರನ್ನು ಕೊಲೆ ಮಾಡಿದ್ದೇನೆ ಎಂದು ಆತ ಹೇಳಿದ್ದಾನೆ.
ಆಗ್ರಾ ಮೂಲದ ಕುಟುಂಬ ಡಿಸೆಂಬರ್ 30ರಿಂದ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು ಮತ್ತು ಹೊಸ ವರ್ಷವನ್ನು ಆಚರಿಸಲು ಉತ್ತರ ಪ್ರದೇಶ ರಾಜಧಾನಿ ಲಕ್ನೋಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ. ಈಗಾಗಲೇ ಆಗ್ರಾದ ನಿವಾಸಿ ಅರ್ಷದ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೋಟೆಲ್ ಶರಣ್ ಜೀತ್‌ನ ಕೋಣೆಯಲ್ಲಿ 5 ಜನರ ಶವಗಳು ಪತ್ತೆಯಾಗಿವೆ. ಬಂಧನಕ್ಕೊಳಗಾಗಿರುವ ಅರ್ಷದ್ ಕೊಲೆಗೆ ಬಳಸಿದ್ದ ಚಾಕು ಮತ್ತು ಸ್ಕಾರ್ಫ್ ಅನ್ನು ಪೊಲೀಸರಿಗೆ ನೀಡಿದ್ದಾನೆ.


