Wednesday, April 30, 2025
30.3 C
Bengaluru
LIVE
ಮನೆ#Exclusive Newsದೇವಸ್ಥಾನಗಳಿಗೆ ಹರಿದು ಬಂದ ಭಕ್ತರ ದಂಡು, ಧರ್ಮಸ್ಥಳದಲ್ಲಿ ಭಕ್ತ ಸಾಗರ

ದೇವಸ್ಥಾನಗಳಿಗೆ ಹರಿದು ಬಂದ ಭಕ್ತರ ದಂಡು, ಧರ್ಮಸ್ಥಳದಲ್ಲಿ ಭಕ್ತ ಸಾಗರ

ಹೊಸ ವರ್ಷಾರಂಭ ಸಂದರ್ಭದಲ್ಲಿ ಕರ್ನಾಟಕ ಕರಾವಳಿಯ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದು ಬಂದಿದೆ. ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಭಕ್ತರು ದೇಗುಲಗಳಿಗೆ ಆಗಮಿಸಿ ದೇವರ ದರ್ಶನ ಪಡೆದು ಹೊಸ ವರ್ಷದ ದಿನಾರಂಭ ಮಾಡುತ್ತಿದ್ದಾರೆ.

ಕದ್ರಿ ಮಂಜುನಾಥ ದೇಗುಲಕ್ಕೆ ಬೆಳಗ್ಗಿನಿಂದಲೂ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ದೇವಳದ ಕೆರೆಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ದೇವಳದ ಮುಂದೆ ಕಲಶ ಸ್ನಾನ ಮಾಡುತ್ತಿದ್ದಾರೆ. ಕದ್ರಿ ದೇವಳದಲ್ಲಿ ಕಲಶ ಸ್ನಾನ ಸೇವೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಧರ್ಮಸ್ಥಳದಲ್ಲಿ ಭಕ್ತ ಸಾಗರ

ಹೊಸ ವರ್ಷಾರಂಭದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಭಕ್ತ ಸಾಗರವೇ ನೆರೆದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ದಂಡು ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮುಗಿಬಿದ್ದಿದೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸದ್ಯ ದೇವಸ್ಥಾನದ ಕ್ಯೂ ಸೆಂಟರ್​ನಲ್ಲಿ ಭಾರೀ ಜನಜಂಗುಳಿ ಏರ್ಪಟ್ಟಿದೆ.

ದೇವಸ್ಥಾನದ ಮುಂಭಾಗದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿದ್ದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.

ಕರಾವಳಿಯ ದೇವಸ್ಥಾನಗಳು ಮಾತ್ರವಲ್ಲದೆ ಮೈಸೂರು, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳ ದೇಗುಲಗಳಲ್ಲಿ ಬೆಳಗ್ಗೆ ಭಕ್ತ ಸಮೂಹ ದೇವರ ದರ್ಶನಕ್ಕೆ ಆಗಮಿಸಿದೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೂಡ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ಮಾದಪ್ಪನಿಗೆ ಸಹಸ್ರಾರು ಭಕ್ತರಿಂದ ಪೂಜೆ ಸಲ್ಲಿಕೆಯಾಗಿದೆ. ಮಲೆ ಮಹದೇಶ್ವರನಿಗೆ ಸಾವಿರಾರು ಭಕ್ತರು ಚಿನ್ನದ ರಥ, ಬೆಳ್ಳಿ ರಥ, ಬಸವ ವಾಹನ, ರುದ್ರಾಕ್ಷಿ ಮಂಟಪ ಮತ್ತಿತರ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳವಾರದಿಂದಲೇ ಅಪಾರ ಸಂಖ್ಯೆಯ ಭಕ್ತರು ಬೆಟ್ಟದಲ್ಲಿ ಬೀಡುಬಿಟ್ಟಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ ಚಿಕ್ಕಬಳ್ಳಾಪುರದ ನಂದಿಯ ಇತಿಹಾಸ ಪ್ರಸಿದ್ಧ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಸ್ಥಾನಕ್ಕೆ ನೂರಾರು ಭಕ್ತರು ಆಗಮಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಹೊಸ ವರ್ಷಾಚರಣೆ ಹಿನ್ನಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರುತ್ತಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments