ದೆಹಲಿ: ಭಾರತದ ಆರ್ಥಿಕತೆಯ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಶೇ.25 ರಷ್ಟು ಸುಂಕವು ಬಹಳ ಗಂಭೀರ ವಿಷಯವಾಗಿದ್ದು, ಇದು ಅಮೆರಿಕದೊಂದಿಗಿನ ಭಾರತದ ವ್ಯಾಪಾರವನ್ನು ಹಾಳು ಮಾಡಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಇದು ನಮಗೆ ಬಹಳ ಕಠಿಣ ವಿಷಯವಾಗಿದೆ. ಈಗಾಗಲೇ ಶೇ.25 ರಷ್ಟು ದಂಡವನ್ನು ಎದುರಿಸುತ್ತಿದ್ದೇವೆ. ನಾವು ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸಿದ್ದಕ್ಕಾಗಿ ಹೆಚ್ಚಿನ ದಂಡವನ್ನು ವಿಧಿಸಬಹುದು. ಶೇ.35-45 ರಷ್ಟು ಏರಿಕೆ ಮಾಡಬಹದು. ಶೇ.100ರಷ್ಟು ದಂಡವನ್ನು ಹೆಚ್ಚಿಸುವ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ಅಮೆರಿಕಾದೊಂದಿಗಿನ ನಮ್ಮ ವ್ಯಾಪಾರ ಸಂಪೂರ್ಣ ನಾಶವಾಗಿ ಹೋಗುವ ಸಾಧ್ಯತೆಯಿದೆ. ವ್ಯಾಪಾರ ಮಾತುಕತೆಗಳು ನಡೆಯುತ್ತಿವೆ ಮತ್ತು ಅದು ಕುಸಿಯುವ ಸಾಧ್ಯತೆಯಿದೆ. ಅದು ಹಾಗೆ ಮಾಡದಿದ್ದರೆ ನಮ್ಮ ರಫ್ತಿನ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತರೂರ್ ಹೇಳಿದ್ದಾರೆ.
ಅಮೆರಿಕ ನಮ್ಮ ಅಗತ್ಯಗಳನ್ನು ಸಹ ಅರ್ಥಮಾಡಿಕೊಳ್ಳಬೇಕು. ಅಮೆರಿಕದ ಮೇಲಿನ ನಮ್ಮ ಸುಂಕಗಳು ಅಷ್ಟೊಂದು ಅಸಮಂಜಸವಲ್ಲ. ಇದು ಸರಾಸರಿ 17% ರಷ್ಟಿದೆ. ಅಮೆರಿಕದ ಸರಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸ್ಪರ್ಧಾತ್ಮಕವಾಗಿ ಸಾಕಷ್ಟು ಬೆಲೆಯನ್ನು ಹೊಂದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಮಾಜಿ ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಅಮೆರಿಕಕ್ಕೆ ಭಾರತದಿಂದ ರಫ್ತಾಗುವ ಎಲ್ಲಾ ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದು ಮತ್ತು ರಷ್ಯಾದ ತೈಲ ಖರೀದಿಗೆ ದಂಡ ವಿಧಿಸುವುದು ಅಮೆರಿಕ ಜೊತೆಗಿನ ಭಾರತದ ವ್ಯಾಪಾರಕ್ಕೆ “ದೊಡ್ಡ ಹೊಡೆತ” ಎಂದು ಹೇಳಿದರು.


