ದೆಹಲಿ: ಲೋಕಸಮರಕ್ಕೆ ಬಿಜೆಪಿ ಸಕಲ ತಯಾರಿ ಮಾಡಿಕೊಂಡಿದೆ. ಯಾವುದೇ ಕ್ಷಣದಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಗೊಳ್ಳಲಿದೆ. ನಿನ್ನೆ ರಾತ್ರಿಯಿಂದ ಇಂದು ಮುಂಜಾನೆಯವರೆಗೂ ನಡೆದ ಬಿಜೆಪಿ ಕೇಂದ್ರಿಯ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಮಾನದಂಡ ಕುರಿತಾಗಿ ಸುದೀರ್ಘವಾಗಿ ಚರ್ಚಿಸಲಾಯಿತು.
ದಕ್ಷಿಣ ಭಾರತ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಚಿಂತಿಸಲಾಗಿದೆ. ಟಿಕೆಟ್ ತಪ್ಪಿದವರಿಗೆ ಪಕ್ಷಕ್ಕಾಗಿ ದುಡಿಯಲು ಅನುವು ಮಾಡಿಕೊಡಲು ಸಭೆಯಲ್ಲಿ ಚಿಂತನೆ ನಡೆದಿದೆ. ಪ್ರಮುಖವಾಗಿ ಮೂರನೇ ಬಾರಿಯೂ ಮೈತ್ರಿಕೂಟವು ಭಾರೀ ಸಂಖ್ಯೆಯಲ್ಲಿ ಗೆಲ್ಲಲು ಹಲವು ರೂಪುರೇಷೆಗಳನ್ನ ರೂಪಿಸಲು ಸಭೆಯಲ್ಲಿ ಚರ್ಚಿಸಲಾಯಿತು.ಹಲವು ರಾಜ್ಯಗಳಲ್ಲಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಸ್ವಲ್ಪ ಹಿನ್ನಡೆ ಹಿನ್ನೆಲೆ, ಕೇವಲ 3 ದಿನಗಳಲ್ಲಿ 6 ರಾಜ್ಯಗಳಿಗೆ ಸಾವಿರಾರು ಕೋಟಿ ಬಂಪರ್ ಯೋಜನೆಗಳ ಕೊಡುಗೆ ನೀಡಲಾಗಿದೆ.
ಕನಿಷ್ಠ ಪಕ್ಷ 50 ದಿನಗಳ ಕಾಲ ಚುನಾವಣಾ ಪ್ರಚಾರಕ್ಕೆ ಬೂತ್ ಮಟ್ಟದಿಂದ ರಾಷ್ಟ್ರೀಯ ನಾಯಕರವರೆಗೂ ಪ್ರಚಾರಕ್ಕಾಗಿ ಸಮಯ ಮೀಸಲಿಡಲು ತಾಕೀತು ಮಾಡಲಾಗಿದೆ. ಸುಮಾರು ದಕ್ಷಿಣ ಭಾರತ ಸೇರಿದಂತೆ ಮೈತ್ರಿಕೂಟದ 250 ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, 100 ಅಭ್ಯರ್ಥಿಗಳ ಮೊದಲ ಪಟ್ಟಿ ಯಾವುದೇ ಕ್ಷಣದಲ್ಲಾದರೂ ಬಿಡುಗಡೆಯಾಗಲಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷದ ಕೆಲ ಹಿರಿಯ ನಾಯಕರಿಗೆ ಸ್ಥಾನ ತ್ಯಜಿಸಲು ಸಿದ್ಧರಾಗಿ ಎಂದು ಪರೋಕ್ಷವಾಗಿ ತಿಳಿಸಲಾಗಿತ್ತು. ಅಲ್ಲದೆ ಅಸಮಾಧಾನ ಉಂಟಾಗದಂತೆ ತಡೆಯಲು ಪಕ್ಷದ ಮಟ್ಟದಲ್ಲಿ ಪ್ರಮುಖ ಹುದ್ದೆಗಳನ್ನು, ಸ್ಥಾನ ತ್ಯಜಿಸಿದ ಸಂಸದರಿಗೆ ನೀಡಲು ಚಿಂತಿಸಲಾಗಿದೆ.
ಇನ್ನು ಈ ಬಾರಿ ಬಿಜೆಪಿ 370 ಹಾಗೂ ಎನ್‌ಡಿಎ ಮೈತ್ರಿಕೂಟ 400 ಸೀಟುಗಳನ್ನ ಗೆಲ್ಲಲಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿದ್ದು ಆ ನಿಟ್ಟಿನಲ್ಲಿ ಬಿಜೆಪಿ ಕೂಡ ತಂತ್ರಗಾರಿಕೆ ನಡೆಸಿದೆ.