ಬೆಂಗಳೂರು : ರಾಜ್ಯಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೂರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿಯಿಂದ ಅಖಾಡಕ್ಕೆ ಇಳಿದಿದ್ದ ಓರ್ವ ಅಭ್ಯರ್ಥಿಗೆ ಗೆಲುವಾಗಿದೆ.
ಇನ್ನು ಚುನಾವಣೆಯಲ್ಲಿ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದರೆ ಮತ್ತೋರ್ವ ಶಾಸಕ ಶಿವರಾಂ ಹೆಬ್ಬಾರ್ ಗೈರಾಗಿದ್ದಾರೆ. ಈ ಮೂಲಕ ನಿರೀಕ್ಷೆಯಂತೆ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಸೋಲಾಗಿದೆ. ಕಾಂಗ್ರೆಸ್ 134 ಸದಸ್ಯರು ಬಂದು ಮತದಾನ ಮಾಡಿದರು. ಜೊತೆಗೆ ನಾಲ್ವರು ಪಕ್ಷೇತರ ಶಾಸಕರು ಕೂಡಾ ಕಾಂಗ್ರೆಸ್ ಗೆ ಮತ ಚಲಾಯಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅಜಯ್ ಮಾಕೇನ್ ಗೆ 47, ಸೈಯದ್ ನಾಸೀರ್ ಹುಸೇನ್ ಗೆ 47 ಹಾಗೂ ಜಿ.ಸಿ ಚಂದ್ರಶೇಖರ್ ಗೆ 45 ಮತಗಳು ಬಿದ್ದಿವೆ. ಇನ್ನು ಬಿಜೆಪಿ ಅಭ್ಯರ್ಥಿ ನಾರಾಯಣ ಭಾಂಡಗೆಗೆ 48 ಮತಗಳು ಬಿದ್ದಿದ್ದು ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ 36 ಮತಗಳು ಸಿಕ್ಕಿವೆ.
ಪಕ್ಷದ ವಿರುದ್ಧ ಮತ ಚಲಾಯಿಸಿದ ಶಾಸಕ ಎಸ್.ಟಿ. ಸೋಮಶೇಖರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಯಶವಂತಪುರ ಬಿಜೆಪಿ ಮಂಡಲ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಜೆಡಿಎಸ್ ಕಾರ್ಯಕರ್ತರು ಬುಧವಾರ ಪಕ್ಷದ ಕಚೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಇತ್ತಿಚೀಗೆ ನಡೆದ ಶಿಕ್ಷಕರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಸೋಲಾಗಿತ್ತು. ಇದು ಕುಪೇಂದ್ರ ರೆಡ್ಡಿಗೆ ಸತತ 2ನೇ ಬಾರಿಗೆ ಸೋಲಾಗಿದೆ. ಮೈತ್ರಿ ಅಭ್ಯರ್ಥಿಗೆ ಭಾರೀ ಮುಖಭಂಗವಾಗಿದೆ.