ತುಮಕೂರು : ಪಾವಗಡದಲ್ಲಿ ನೂತನವಾಗಿ ನಿರ್ಮಾಣವಾಗಿರುವ ತಾಯಿ, ಮಗು ಆಸ್ಪತ್ರೆ ಪ್ರಾರಂಭವಾಗಿ ಇನ್ನೂ ಮೂರು ತಿಂಗಳು ಕಳೆದಿಲ್ಲ, ವೈದ್ಯರ ನಿರ್ಲಕ್ಷ್ಯ ದಿಂದ ಮೂವರು ಮಹಿಳೆಯರು ಮೃತಪಟ್ಟಿರುವ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ಮೃತರ ಸಂಬಂಧಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಕಳೆದ 22 ರಂದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾದ ಏಳು ಮಹಿಳೆಯರಲ್ಲಿ ಅಂದೇ ನಾಲ್ವರಿಗೆ ಸಿಜೆರಿಯನ್ ಹಾಗೂ ಒಬ್ಬರಿಗೆ ಸಹಜ ಹೆರಿಗೆ ಮತ್ತೊಬ್ಬರಿಗೆ ಗರ್ಭಕೋಶದ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ.
ಫೆ. 22 ರಂದು 7 ಮಂದಿಗೆ ಹೆರಿಗೆ ಸೇರಿದಂತೆ ವಿವಿಧ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿದ್ದ ವೀರ್ಲಗೊಂದಿ ಗ್ರಾಮದ ಮಹಿಳೆ, 30 ವರ್ಷದ ಅನಿತಾ ಸಂತಾನ ಹರಣ ಚಿಕಿತ್ಸೆ ನಡೆದ ದಿನವೇ ಸಾವನ್ನಪ್ಪಿದ್ದಾರೆ.
ರಾಜವಂತಿ ಮೂಲದ ಅಂಜಲಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಅಂಜಲಿ ಸ್ಥಿತಿ ಗಂಭೀರವಾಗಿತ್ತು. ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಅಂಜಲಿಯನ್ನು ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಂಜಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫೆ. 24 ರಂದು ಮೃತಪಟ್ಟಿದ್ದಾರೆ.
ಬ್ಯಾಡನೂರು ಗ್ರಾಮದ 40 ವರ್ಷದ ನರಸಮ್ಮಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರ ಚಿಕಿತ್ಸೆ ಬಳಿಕ ನರಸಮ್ಮ ಸ್ಥಿತಿ ಗಂಭೀರವಾಗಿತ್ತು. ನರಸಮ್ಮ ಅವರನ್ನು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಫೆ. 25 ರಂದು ನರಸಮ್ಮ ಸಾವನ್ನಪ್ಪಿದ್ದರು.
ಈ ಮೂವರ ಸಾವಿಗೆ ನ್ಯಾಯ ಒದಗಿಸುವಂತೆ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಮೃತ ಅಂಜಲಿ ಭಾವಚಿತ್ರ ಹಿಡಿದು ಪಾವಗಡದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪಾವಗಡ – ಬಳ್ಳಾರಿ ರಸ್ತೆ ತಡೆ ನಡೆಸಿದರು. ಈ ಎಲ್ಲಾ ಶಸ್ತ್ರ ಚಿಕಿತ್ಸೆಯನ್ನು ಡಾ. ಪೂಜಾ ನಡೆಸಿದ್ದರು. 7 ಜನರಲ್ಲಿ ಉಳಿದ ನಾಲ್ವರು ಆರೋಗ್ಯವಾಗಿದ್ದಾರೆ.
ಘಟನೆ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ನಿರ್ದೇಶಕರು ಮತ್ತು ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿಗಳು ಪಾವಗಡ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂರು ಮಹಿಳೆಯರ ಮರಣೋತ್ತರ ಪರೀಕ್ಷೆ ಶ್ಯಾಂಪಲ್ ಗಳನ್ನು ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ದೊರೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ತುಮಕೂರು ಜೆಲ್ಲೆಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಡಿ ಹೆಚ್ ಓ ಮಂಜುನಾಥ್ ಅವರು ಮಾತನಾಡಿ ಈ ತಿಂಗಳ 22 ರಂದು ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಗರ್ಭಕೋಶ ಚಿಕಿತ್ಸೆ ಗೆಂದು ದಾಖಲಾಗಿದ್ದವರಲ್ಲಿ 7 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇವರಲ್ಲಿ ಅಂಜಲಿ ಹೆರಿಗೆ ಸಂಬಂಧ, ಅನಿತಾ ಸಂತಾನ ಹರಣ ಹಾಗೂ ನರಸಮ್ಮ ಗರ್ಭಕೋಶದ ಚಿಕಿತ್ಸೆಗೆ ದಾಖಲಾಗಿದ್ದು, ಸೋಂಕಿನಿಂದ ಮೃತಪಟ್ಟಿದಾರೆ.ಅಂದು ಚಿಕಿತ್ಸೆ ಪಡೆಯುತ್ತಿದ ಏಳು ಮಹಿಳೆಯರಿಗೂ ಸೋಂಕು ತಗುಲಿದೆ. ಅದರಲ್ಲಿ ನಾಲ್ಕು ಮಂದಿಯನ್ನು ಚಿಕಿತ್ಸೆ ನೀಡಿ ರಕ್ಷಣೆ ಮಾಡಲಾಗಿದೆ. ಉಳಿದ ಮೂವರಿಗೆ ಸೋಂಕು ಹೆಚ್ಚಾದ ಪರಿಣಾಮ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ Staphylococcus ಅಥವಾ streptococcus ಸೋಂಕಿನಿಂದ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.ಮೃತರ ಮರಣೋತ್ತರ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. 21 ದಿನಗಳ ನಂತರ ವರದಿ ಬರುತ್ತದೆ. ಆಗ ಸಾವಿನ ನಿಖರ ಮಾಹಿತಿ ತಿಳಿಯುತ್ತದೆ. ಇಂದೆ ಆಸ್ಪತ್ರೆಯ ಎಎಂಓ, ವೈದ್ಯರು ಹಾಗೂ ಓಟಿ ಯಲ್ಲಿದ ನರ್ಸ್ ಗಳಿಗೆ ನೋಟಿಸ್ ಜಾರಿ ಮಾಡುತ್ತಿದೇವೆ.ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.