ರಾಜ್ಯದ ಶಿಕ್ಷಣ ನೀತಿ ಸೇರಿದಂತೆ ಶೈಕ್ಷಣಿಕವಾಗಿ ಕೈಗೊಳ್ಳುತ್ತಿರುವ ನಿರ್ಧಾರಗಳು ಆಗಾಗ ವಿವಾದಕ್ಕೀಡಾಗುತ್ತಲೇ ಇರುತ್ತವೆ. ಈಗ ಸಮಾಜ ಕಲ್ಯಾಣ ಇಲಾಖೆ ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿ ಕೈಗೊಂಡಿರುವ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕಾರಣ, ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಈಗ ರಾಷ್ಟ್ರಕವಿ ಕುವೆಂಪು ಅವರ ಕವಿತೆಯ ಸಾಲುಗಳನ್ನು ಬದಲಾಯಿಸಲಾಗಿದೆ. “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬ ಸಾಲು ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬುದಾಗಿತ್ತು.. ಅದು ಈಗ ಬದಲಾಗಿದೆ. ಇದಕ್ಕೆ ಈಗ ಬಿಜೆಪಿ ಸೇರಿದಂತೆ ಹಲವರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಸರ್ಕಾರಿ ವಸತಿ ಶಾಲೆಗಳ ದ್ವಾರದಲ್ಲಿ ಈವರೆಗೆ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಘೋಷವಾಕ್ಯವನ್ನು ಹಾಕಲಾಗಿತ್ತು. ಇದು ರಾಷ್ಟ್ರಕವಿ ಕುವೆಂಪು ಅವರ ವಿರಚಿತ ಸಾಲು ಆಗಿತ್ತು. ಆದರೆ, ಈಗ ಈ ಘೋಷವಾಕ್ಯದಲ್ಲಿ ಅಲ್ಪಪ್ರಮಾಣದ ಬದಲಾವಣೆಯನ್ನು ಮಾಡಲಾಗಿದ್ದು, “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂದು ಹಾಕಲಾಗಿದೆ. ಈ ಬದಲಾವಣೆಗೆ ಬಿಜೆಪಿ ಕೆಂಡವಾಗಿದೆ. ಸದನದಲ್ಲಿ ಸಹ ಈ ಕ್ರಮವನ್ನು ಪ್ರಶ್ನಿಸುವುದಲ್ಲದೆ, ಖಂಡಿಸುವುದಾಗಿ ಹೇಳಿಕೊಂಡಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.