Wednesday, January 28, 2026
27.9 C
Bengaluru
Google search engine
LIVE
ಮನೆಜಿಲ್ಲೆದೇವರ ಹೆಸರಲ್ಲಿ ದರೋಡೆ ಮಾಡಿದವರನ್ನ ಬಿಡಲ್ಲ: ಸಚಿವ ಶಿವರಾಜ್ ತಂಗಡಗಿ

ದೇವರ ಹೆಸರಲ್ಲಿ ದರೋಡೆ ಮಾಡಿದವರನ್ನ ಬಿಡಲ್ಲ: ಸಚಿವ ಶಿವರಾಜ್ ತಂಗಡಗಿ

ವಿಧಾನ ಪರಿಷತ್: ದೇವರ ಹೆಸರಿನಲ್ಲಿ (ಪರಶುರಾಮ್ ಥೀಮ್ ಪಾರ್ಕ್) ದರೋಡೆ ಮಾಡಿದವರನ್ನು ನಾವು ಬಿಡುವ ಪ್ರಶ್ನೆಯೇ ಇಲ್ಲ, ತಪ್ಪಿಸ್ಥತರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ‌ ಸಚಿವ‌ ಶಿವರಾಜ್ ತಂಗಡಗಿ ಹೇಳಿದ್ದಾರೆ.

ವಿಧಾನಪರಿಷತ್ ನಲ್ಲಿ ಯು.ಬಿ.ವೆಂಕಟೇಶ್ ಅವರು, ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಎರ್ಲಪಾಡಿಯ ಬೈಲೂರು ಉಮಿಕಲ್‌ ಬೆಟ್ಟದಲ್ಲಿ ನಿರ್ಮಿಸಲಾದ ದೋಷಪೂರಿತ‌ ಪರಶುರಾಮ ಪ್ರತಿಮೆ‌ ಸ್ಥಾಪನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರದ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಸಚಿವರು, ಎರ್ಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲೂರು ಬೆಟ್ಟದಲ್ಲಿ 8 ಕೋಟಿ ವೆಚ್ಚದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ 33 ಅಡಿ ಎತ್ತರ ಹಾಗೂ 6 ಅಗಲದ ಪರಶುರಾಮ್ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ 61.20 ಮೀ‌ ಉದ್ದ ಮತ್ತು 6.20 ಮೀ ಅಗಲ ರಸ್ತೆಯ ಕಲ್ಲು, ಪರಶುರಾಮ ಪ್ರತಿಮೆಯ ತಳಪಾಯದ ಕಾಂಕ್ರೀಟಿಕರಣ ಹಾಗೂ ಪುತ್ಥಳಿಯ ಆಂತರಿಕ ಸ್ಟ್ರಕ್ಚರಲ್ ಫ್ರೇಂ ಕೆಲಸಕ್ಕಾಗಿ 55 ಲಕ್ಷ‌ ಹಣ ಒದಗಿಸಲಾಗಿದೆ. ಉಳಿದಂತೆ ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಜಿಲ್ಲಾಡಳಿತ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಥೀಮ್ ಪಾರ್ಕ್ ಗೆ ಹಣ ಒದಗಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ಕೂಡ  ಈ ಬಗ್ಗೆ ಮಾಹಿತಿ ಪಡೆದಿದೆ ಎಂದರು.

ಹಿಂದಿನ ಸರ್ಕಾರದಲ್ಲಿ ಆದ ಎಡವಟ್ಟನ್ನು ಈಗ ಸರಿಪಡಿಸುತ್ತಿದ್ದೇವೆ. ಆ ಭಾಗದಲ್ಲಿ ದೈವದ ಬಗ್ಗೆ ಹೆಚ್ಚು ನಂಬಿಕೆ.‌ ದೇವರ ಹೆಸರೇಳಿ ದುಡ್ಡು ಹೊಡೆಯುವ ಕೆಲಸ ಆಗಿದೆ. ದೇವರನ್ನು ಹೊತ್ತುಕೊಂಡು ಹೋಗುವವರ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ. ನಿಜವಾದ ಕಳ್ಳರು ಯಾರು ಅಂತಾ ಗೊತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿಗರನ್ನು ಸಚಿವರು ಕುಟುಕಿದರು.

ಸಚಿವರ ಹೇಳಿಕೆಗೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರು, ನಾವು ಈಗಲೂ ದೇವರನ್ನು ಹೊತ್ತುಕೊಂಡು ಹೋಗುವವರೇ, ತನಿಖೆ ನಡೆಸುತ್ತೇವೆ ಎಂದು ಮಾತ್ರ ಹೇಳಿ ಎಂದರು. ಇದಕ್ಕೆ ಬಿಜೆಪಿಯ ಕೇಶವ ಪ್ರಸಾದ್,‌ ಗೋವಿಂದ ರಾಜು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಎಲ್ಲರನ್ನೂ ಸಮಾಧಾನ ಪಡಿಸಿದರು.‌

ತದನಂತರ ಮಾತನಾಡಿದ ಸಚಿವರು, ನಮ್ಮ ಸರ್ಕಾರದ ಮೇಲೆ ಆರೋಪ ಬಂದಿದ್ದಕ್ಕೆ ಹೇಳುತ್ತಿದ್ದೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಈಗಾಗಲೇ ಮುಖ್ಯಮಂತ್ರಿ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದಾರೆ. ತನಿಖೆ ನಡೆದು, ಕ್ರಮ‌ ಜರುಗಿಸಲಾಗುವುದು. ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.‌

ಯು.ಬಿ.ವೆಂಕಟೇಶ್ ಅವರು, 14 ಕೋಟಿ ಅನಮೋದನೆ ಪಡೆದು ತರಾತುರಿಯಲ್ಲಿ ಒಂದು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಮಾಡಿ ಉದ್ಘಾಟಿಸುವ ಅಗತ್ಯ ಏನಿತ್ತು. ಇದಕ್ಕೆ ಜಿಲ್ಲಾಡಳಿತದ ವೈಫಲ್ಯ ಕಾರಣ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಗಬೇಕು. ಪಾರ್ಕ್ ನಿರ್ಮಾಣ ಮಾಡುವ ನೆಪದಲ್ಲಿ‌ ದರೋಡೆ ಮಾಡಲಾಗಿದೆ ಎಂದು ಪರೋಕ್ಷವಾಗಿ ಹಿಂದಿನ ಸರ್ಕಾರದ ವಿರುದ್ಧ ಗುಡುಗಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments