ಚಿತ್ರದುರ್ಗ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ.
ರಾಜ್ಯದ ಬಿಜೆಪಿ ಚುಕ್ಕಾಣಿ ಹಿಡಿದಿರುವ ಬಿ ವೈ ವಿಜಯೇಂದ್ರ ಅವರು ಕಳೆದ ಒಂದು ವಾರದ ಕೆಳಗೆ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಮಾಡಿದ್ದಾರೆ. ಆದರೆ ರಾಜ್ಯದೆಲ್ಲೆಡೆ ಕಳೆದ ಬಾರಿ ಅಧ್ಯಕ್ಷರಾಗಿದ್ದವರನ್ನೇ ಈ ಬಾರಿಯೂ ಮುಂದುವರೆಸಲಾಗಿದೆ.
ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಕೂಡ ಕಳೆದ ಬಾರಿ ಜಿಲ್ಲಾಧ್ಯಕ್ಷರಾಗಿದ್ದ ಮುರುಳಿ ಅವರನ್ನು ಮುಂದುವರೆಸಲಾಗಿದೆ. ಇದು ಬಹುತೇಕ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಜೊತೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಆಯ್ಕೆಯಲ್ಲೂ ಕೂಡ ಅಧ್ಯಕ್ಷರು ತಾರತಮ್ಯ ಮಾಡಿದ್ದಾರೆ, ಇದು ವಿಧಾನ ಸಭೆ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳನ್ನು ಕಳೆದುಕೊಂಡು ಒಂದೇ ಒಂದು ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದೆ.
ಪಕ್ಷಕ್ಕಾಗಿ ದುಡಿದವರಿಗೆ ಸ್ಥಾನಮಾನ ನೀಡುವುದು ಬಿಟ್ಟು ತಮಗೆ ಬೇಕಾದವರಿಗೆ ಕೊಟ್ಟಿದ್ದಾರೆಂದು ಜಿಲ್ಲೆಯಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಹಾಲಿ ಶಾಸಕನಾಗಿರುವ ನನ್ನ ಗಮನಕ್ಕೂ ತರದೆ ಜಿಲ್ಲಾ ಸಮಿತಿಯಲ್ಲಿ ಬದಲಾವಣೆ ಮಾಡಿದ್ದಾರೆಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಸಿಡಿಮಿಡಿಗೊಂಡಿದ್ದು,ಇದರ ಜೊತೆಯಲ್ಲಿ ಜಿಲ್ಲೆಯಲ್ಲಿ ಮೂರು ಬಣಗಳಾಗಿದ್ದು, ಮಾಜಿ ಶಾಸಕ ಜಿಹೆಚ್. ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಮತ್ತು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರ ಬಣಗಳಾಗಿವೆ ಎಂದು ಪಕ್ಷದ ಕೆಲ ಮುಖಂಡರು ಹೇಳುತ್ತಿದ್ದು, ಇದು ನಾಳೆ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಪರಿಣಾಮ ಬೀರಲಿದೆ. ಇದರ ಬಗ್ಗೆ ದೂರುಗಳು ಬೆಂಗಳೂರಿನ ತಮ್ಮ ತಮ್ಮ ನಾಯಕರುಗಳ ಬಳಿ ದೂರು ನೀಡಲಾಗಿದೆ. ಅವರೇ ಬಂದು ಸರಿ ಮಾಡಬೇಕು.ಇಲ್ಲದೇ ಹೋದರೆ ಲೋಕಸಭಾ ಚುನಾವಣೆ ಮೇಲೆ ದುಷ್ಪರಿಣಾಮ ಬೀರಲಿದೆ ಎನ್ನುವುದು ಜಿಲ್ಲೆಯ ಬಿಜೆಪಿ ಮುಖಂಡರ ಅಭಿಪ್ರಾಯವಾಗಿದೆ.