ಮೈಸೂರು ; ಯಾರೋ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಅರಣ್ಯ ಪ್ರದೇಶದ ಒಂದಷ್ಟು ಭಾಗ ಸುಟ್ಟು ಹೋಗಿದೆ. ಕೋಣನೂರು ಗ್ರಾಮದ ಹೊರವಲಯದಲ್ಲಿರುವ ಎತ್ತಿನ ಮುಂಟಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸುಳಿಗಾಳಿಗೆ ಸಿಲುಕಿ ಮೇವಿನ ಪ್ರದೇಶಕ್ಕೂ ಬೆಂಕಿ ವ್ಯಾಪಿಸಿದ್ದು ಒಂದಷ್ಟು ಪ್ರದೇಶ ಬೆಂಕಿಗಾಹುತಿಯಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ರೈತರು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಲು ಹರ ಸಾಹಸಪಟ್ಟಿದ್ದಾರೆ. ದನ-ಕರುಗಳು ಮತ್ತು ಕಾಡು ಪ್ರಾಣಿಗಳ ಆಹಾರವಾಗಿದ್ದ ಪ್ರದೇಶ ಈಗ ಸುಟ್ಟು ಕರಕಲಾಗಿದೆ. ಜಾನುವಾರುಗಳಿಗೆ ಮೇವಿಗೆ ಕೊರತೆಯಾಗುವ ಸಾಧ್ಯತೆ ಇದೆ. ಅರಣ್ಯ ಪ್ರದೇಶದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಅರಣ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.


