ವರದಿ : ಚಂದ್ರು, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ನಗರೋತ್ಥಾನ ಕಾಮಗಾರಿಗಳನ್ನು ಸಂಪೂರ್ಣವಾಗಿ ವೀಕ್ಷಿಸಿದ್ರು. ಸ್ಥಳೀಯ ಶಾಸಕ ಮೇಲೂರು ರವಿಕುಮಾರ್ ಕೂಡ ಜಿಲ್ಲಾಧಿಕಾರಿ ಜೊತೆ ಸೇರಿದ್ರು. ನಗರೋತ್ಥಾನಬಯೋಜನೆಯಡಿ ಈಗಾಗಲೆ 30 ಕೋಟಿ ರೂ ಬಿಡುಗಡೆಯಾಗಿದ್ದು, ಸೀಮೆಂಟ್ ರಸ್ತೆ ನಿರ್ಮಾಣಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. ಒಳಚರಂಡಿ ನಿರ್ಮಾಣಕ್ಕೆ ಪ್ರಥಮ ಹಂತದಲ್ಲಿ 30 ಕೋಟಿ ಹಾಗೂ ಉಧ್ಯಾನವನ ನಿರ್ಮಾಣಕ್ಕೆ 30 ಕೋಟಿ ಹಣ ಸರ್ಕಾರ ಮೊದಲ ಹಂತದಲ್ಲಿ ಬಿಡುಗಡೆ ಮಾಡಿದೆ.
ನಗರದಲ್ಲಿ ಅತ್ಯುತ್ತಮವಾದ ಸುಂದರವಾದ ಉಧ್ಯಾನವನ ನಿರ್ಮಾಣಕ್ಕೆ ರೈಲ್ವೆ ಜಾಗದಲ್ಲಿ ನಿರ್ಮಾಣ ಮಾಡಲು ಯೋಜನೆ ಸಿದ್ದಗೊಳ್ಳುತ್ತಿದೆ. ಸುಮಾರು ಎಂಟು ಎಕರೆ ಪ್ರದೇಶದಲ್ಲಿ ಈ ಉಧ್ಯಾನವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸ್ಥಳ ಪರಿಶೀಲನೆ ನಡೆಸಲಾಯಿತು. ರೈಲ್ವೆ ಇಲಾಖೆಗೆ ಮನವಿಯನ್ನು ಈಗಾಗಲೆ ಸಲ್ಲಿಸಲಾಗಿದೆ. ಆಸ್ತಿ ತೆರಿಗೆ ವಸೂಲಿ ಮಾಡುವಲ್ಲಿ ನಗರಸಭೆ ಹಿಂದೆ ಬಿದ್ದಿದೆ.
ಇದಕ್ಕೆ ಕಾರಣ ಹೊಸ ನಗರ, ಹಳೆ ನಗರ ಎಂದು ಪ್ರತ್ಯೇಕವಾಗಿರುವುದರಿಂದ ತೆರಿಗೆ ವಸೂಲಿಯಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಹೊಸ ನಗರದ ಆಸ್ತಿಗಳಿಗೆ ಖಾತೆ ನಿರ್ಮಿಸಿದ ನಂತ್ರ ಇದನ್ನು ವಸೂಲಿ ಮಾಡಬಹುದಾಗಿದೆ. ಹಳೆ ನಗರದ ತೆರಿಗೆಯನ್ನು ಆದಷ್ಟು ವಸೂಲಿ ಮಾಡುವಂತೆ ಸೂಚಿಸಿದ್ರು. ಇನ್ನುಳಿದಂತೆ ಇರುವ ಆಸ್ತಿ ತೆರಿಗೆಯನ್ನು ಸ್ವ ಇಚ್ಚೆಯಿಂದ ನಾಗರೀಕರು ಸಲ್ಲಿಸಬೇಕಿದೆ. ನಗರಸಭೆಗೆ ಬೇರೆ ಬೇರೆ ಮೂಲಗಳಿಂದ ಬರಬೇಕಾದ ತೆರಿಗೆಯನ್ನು ವಸೂಲಿ ಮಾಡುವಂತೆ ಸಿಬ್ಬಂದಿಗೆ ಆದೇಶಿಸಿದ್ರು.
ನಗರಸಭೆಯ ಆಸ್ತಿಗಳನ್ನು ಸೂಕ್ತವಾಗಿ ರಕ್ಷಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ್ರು. ಇನ್ನು ನಗರಸಭೆ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ನಾಗರೀಕರ ಕುಂದುಕೊರತೆ ಬಗ್ಗೆ ದೂರುಗಳನ್ನು ಸ್ವೀಕರಿಸಲಾಯಿತು. ಈ ಸಮಯದಲ್ಲಿ ನಗರಸಭಾ ಸದಸ್ಯರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಬಳಿ ವಿನಂತಿಸಿಕೊಂಡರು.