ಮಂಡ್ಯ : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ಧ್ವಜಸ್ತಂಭ ವಿವಾದ ಬೂದಿ ಮುಚ್ಚಿದ ಕೆಂಡವಾಗಿದೆ. ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ರಾಜಕೀಯ ಕಿತ್ತಾಟ ತಾರಕಕ್ಕೇರಿದೆ. ಕೆರಗೋಡು ಹನುಮ ಧ್ವಜ ತೆರವು ಗದ್ದಲದಲ್ಲಿ ಪಿಡಿಓ ತಲೆ ದಂಡವಾಗಿದೆ. ಹನುಮ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ, ರಾಜ್ಯಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.
ಇನ್ನು ಮಂಡ್ಯದಲ್ಲಿ ಜಂಟಿಯಾಗಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಗದ್ದಲಕ್ಕೆ ಮಂಡ್ಯ ಜಿಲ್ಲಾಡಳಿತವೇ ಕಾರಣ, ಜಿಲ್ಲಾಧಿಕಾರಿಯನ್ನು ಅಮಾನತು ಮಾಡುವಂತೆ ಮಾಜಿ ಸಿಎಂ ಹೆಚ್ಡಿಕೆ ಆಗ್ರಹಿಸಿದ್ರು. ಇದರ ಬೆನ್ನಲ್ಲೇ ಕೆರಗೋಡು ಗ್ರಾಮದ ಪಿಡಿಓ ಬಿ.ಎಂ.ಜೀವನ್ ಅವರನ್ನು ಅಮಾನತು ಮಾಡಿ ಮಂಡ್ಯ ಜಿ.ಪಂ. ಸಿಇಓ ಆದೇಶ ಹೊರಡಿಸಿದ್ದಾರೆ.
ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿ ಖಾಸಗಿಯವರಿಗೆ ಧ್ವಜ ಸ್ತಂಭ ನಿರ್ಮಾಣಕ್ಕೆ ನೀಡಲಾಗಿದೆ. ಹೀಗಾಗಿ ಕೆರಗೋಡು ಗ್ರಾಮದಲ್ಲಿ ನಡೆದ ಸಂಘರ್ಷಕ್ಕೆ ಪಿಡಿಓ ನೇರ ಕಾರಣವಾಗಿದ್ದಾರೆ. ಷರತ್ತು ಉಲ್ಲಂಘಿಸಿದ್ದರೂ ಕ್ರಮಕೈಗೊಳ್ಳದೆ ನಿರ್ಲಕ್ಷವಹಿಸಿದ್ದಾರೆ. ರಾಷ್ಟ್ರ ಧ್ವಜದ ಬದಲು ಹನುಮ ಧ್ವಜ ಹಾರಿಸಲು ಅವಕಾಶ ನೀಡಿರುವುದು ಹಾಗೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಕಾರಣ ನೀಡಿ ಬಿ.ಎಂ.ಜೀವನ್ ಅವರನ್ನು ಅಮಾನತು ಮಾಡಲಾಗಿದೆ.
ಒಟ್ಟಾರೆ. ಹನುಮ ಧ್ವಜ ವಿವಾದದಿಂದ ಶಾಂತವಾಗಿದ್ದ ಸಕ್ಕರೆ ನಾಡು ಮಂಡ್ಯ , ಕೊತಕೊತ ಕುದಿಯಲು ಶುರು ಮಾಡಿದೆ. ಸರ್ಕಾರ ಮತ್ತು ವಿಪಕ್ಷಗಳ ರಾಜಕೀಯ ಕಿತ್ತಾಟವೂ ಇದರಿಂದ ಜೋರಾಗಿದೆ.