ಕೊಪ್ಪಳ : ದೇಶದಲ್ಲಿ ಮೋದಿ ಹವಾ ಕಡಿಮೆ ಆಗಿದೆ. ದೇವರಾದ ಶ್ರೀರಾಮನ ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಬಿಜೆಪಿ ಹೊರಟಿದೆ. ಇವರು ಹೀಗೆ ಹೋದ್ರೆ ದೇವರಾದ ರಾಮನಿಗೂ ಬೇಜಾರು ಆಗುತ್ತೆ. ದೇವರ ಜಾತಿಯನ್ನು ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ಬಿಜೆಪಿ ವಿರುದ್ಧ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು. ಸ್ವತಃ ಶ್ರೀರಾಮನೇ ಬಿಜೆಪಿಯವರ ಕನಸಿನಲ್ಲಿ ಬಂದು ಹೇಳ್ತಾನೆ, ನನ್ನ ಕೈಬಿಡಿ ಸಾಕು ಅಂತಾ. ಅಷ್ಟರಮಟ್ಟಿಗೆ ಬಿಜೆಪಿಯವರ ಬಗ್ಗೆ ಶ್ರೀರಾಮನಿಗೆ ಬೇಜಾರು ಆಗುತ್ತೆ ಎಂದರು.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಸವದಿ ಹಾಗೂ ಶೆಟ್ಟರ್ ಮೇಲೆ ನಮಗೆ ಬಹಳ ಗೌರವ ಇದೆ. ಆದ್ರೆ ಶೆಟ್ಟರ್ ಬಿಜೆಪಿಗೆ ಹೋಗಿರುವುದು ಆಶ್ಚರ್ಯ ತಂದಿದೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋದ್ರೆ, ಬಿಜೆಪಿಯಲ್ಲಿನ ಅವರ ವಿರೋಧಿಗಳು ಕಾಂಗ್ರೆಸ್ಗೆ ಬರಬಹುದು. ಬಿಜೆಪಿಯ ಎಂಎಲ್ಎಗಳು ಆಡಳಿತ ಪಕ್ಷದ ಕಡೆ ಹೋಗಬಾರದು ಅಂತಾ ಈ ರೀತಿ ಮಾಡ್ತಾ ಇದ್ದಾರೆ. ಬಿಜೆಪಿ ಎಂಎಲ್ಎಗಳು ಕಾಂಗ್ರೆಸ್ ಬರೋಕೆ ರೆಡಿ ಆಗಿದ್ರು. ಅವರು ಜಂಪ್ ಆಗ್ತಾರೆ ಅಂತಾ ಜಗದೀಶ್ ಶೆಟ್ಟರ್ರನ್ನು ವಾಪಸ್ಸು ಕರೆದುಕೊಂಡು ಹೋಗಿದ್ದಾರೆ. ಅವರು ಹೋದ್ರೂ ಕಾಂಗ್ರೆಸ್ಗೆ ಏನು ಆಗಲ್ಲ. ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲೆ ಇರುತ್ತೆ. ಎಂಪಿ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ತೇವೆ ಎಂದು ಶಿವರಾಜ್ ತಂಗಡಗಿ ಹೇಳಿದರು.