ರಿಯಲ್ ಎಸ್ಟೇಟ್ ಲೋಕದ ಧ್ರುವತಾರೆ, ಸಾವಿರಾರು ಕೋಟಿ ರೂಪಾಯಿಗಳ ಉದ್ಯಮ ಸಾಮ್ರಾಜ್ಯದ ಅಧಿಪತಿ ಸಿ.ಜೆ. ರಾಯ್ ಅವರ ನಿಗೂಢ ಸಾವು ಈಗ ಕೇವಲ ಉದ್ಯಮ ರಂಗವನ್ನಷ್ಟೇ ಅಲ್ಲದೆ, ಇಡೀ ಚಿತ್ರರಂಗ ಮತ್ತು ಕಿರುತೆರೆ ಲೋಕವನ್ನೂ ತಲ್ಲಣಗೊಳಿಸಿದೆ.
ಕರ್ಮ ಬಿಡಲ್ಲ, ಮಾನವೀಯತೆ ಸತ್ತಿದೆ! – ಬಿಗ್ ಬಾಸ್ ಸ್ಪಾನ್ಸರ್ ನಿಧನಕ್ಕೆ ಭುವನ್ ಪೊನ್ನಣ್ಣ ಭಾವುಕ ಪೋಸ್ಟ್
ಬೆಂಗಳೂರು: ಆತ್ಮವಿಶ್ವಾಸವೇ ಬದುಕಿನ ಸ್ಫೂರ್ತಿ’ ಎಂಬ ಮಂತ್ರದೊಂದಿಗೆ ‘ಕಾನ್ಫಿಡೆಂಟ್ ಗ್ರೂಪ್’ ಎಂಬ ಬೃಹತ್ ಉದ್ಯಮ ಕಟ್ಟಿದ್ದ ಡಾ. ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣ ಈಗ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿರಂತರ ಐಟಿ ದಾಳಿಯಿಂದ ಬೇಸತ್ತು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಪ್ರಾಥಮಿಕ ವರದಿಗಳ ನಡುವೆ, ಸಿನಿಮಾ ಗಣ್ಯರು ಮತ್ತು ರಿಯಾಲಿಟಿ ಶೋಗಳ ತಾರೆಯರು ಕಂಬನಿ ಮಿಡಿಯುತ್ತಿದ್ದಾರೆ. ಈ ಪೈಕಿ ನಟ ಭುವನ್ ಪೊನ್ನಣ್ಣ ಹಂಚಿಕೊಂಡಿರುವ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಟಿ ಹರ್ಷಿಕಾ ಪೂಣಚ್ಚ ಅವರ ಪತಿ, ನಟ ಭುವನ್ ಪೊನ್ನಣ್ಣ ಅವರು ರಾಯ್ ಅವರ ಸಾವಿಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನಾವು ಪ್ರೀತಿಯಿಂದ ಕರೆಯುತ್ತಿದ್ದ ಡಾ. ರಾಯ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು. ಅವರು ಯಾವಾಗಲೂ ಜೀವನೋತ್ಸಾಹ ಮತ್ತು ಮಹತ್ವಾಕಾಂಕ್ಷೆಗಳಿಂದ ತುಂಬಿದ್ದರು. ಆದರೆ ಹಣ ಮತ್ತು ಭೌತಿಕ ಲಾಭಗಳ ವಿಷಯಕ್ಕೆ ಬಂದಾಗ ಮಾನವೀಯತೆ ಸತ್ತಿದೆ ಎಂದು ನನಗೆ ಕೆಲವೊಮ್ಮೆ ಅನಿಸುತ್ತದೆ. ರಾಯ್ ಅವರ ಸಾವಿಗೆ ಕಾರಣ ಯಾರೇ ಆಗಿರಲಿ, ಅವರು ‘ಕರ್ಮ’ವನ್ನು ಎದುರಿಸಲೇಬೇಕಾಗುತ್ತದೆ ಎಂದು ಭುವನ್ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಅವರ ಈ ‘ಕರ್ಮ’ದ ಮಾತುಗಳು ಯಾರ ವಿರುದ್ಧ ಎಂಬುದು ಈಗ ಕುತೂಹಲ ಮೂಡಿಸಿದೆ.
ಸಿ.ಜೆ. ರಾಯ್ ಅವರಿಗೆ ಕಿರುತೆರೆಯೊಂದಿಗೆ ಅವಿನಾಭಾವ ಸಂಬಂಧವಿತ್ತು. ಬಿಗ್ ಬಾಸ್ ಕನ್ನಡದ 11ನೇ ಸೀಸನ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಿಗೆ ಇವರು ಪ್ರಾಯೋಜಕರಾಗಿದ್ದರು. ಬಿಗ್ ಬಾಸ್ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರು ರಾಯ್ ಅವರ ಸಮಾಜಮುಖಿ ಕೆಲಸಗಳನ್ನು ಹಾಡಿ ಹೊಗಳಿದ್ದರು. ವಿಶೇಷವಾಗಿ, 11ನೇ ಸೀಸನ್‌ನ ವಿನ್ನರ್ ಹನುಮಂತ ಲಮಾಣಿ ಅವರಿಗೆ 50 ಲಕ್ಷ ರೂಪಾಯಿ ಪ್ರಾಯೋಜಕತ್ವದ ಹಣ ನೀಡಿದ್ದು ಇದೇ ರಾಯ್. ಕೇವಲ ಹಣ ನೀಡುವುದಷ್ಟೇ ಅಲ್ಲದೆ, ಸಾಧಕರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಇವರ ಅಗಲಿಕೆ ಸಿನಿಮಾ ಮತ್ತು ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟ ತಂದಿದೆ.ಯಾವಾಗಲೂ ಹಸನ್ಮುಖಿಯಾಗಿರುತ್ತಿದ್ದ, ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದ ವ್ಯಕ್ತಿ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಅಸಲಿ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ. ಐಟಿ ಇಲಾಖೆಯ ಸತತ ದಾಳಿ ಮತ್ತು ಆ ಮೂಲಕ ಉಂಟಾದ ಮಾನಸಿಕ ಒತ್ತಡವೇ ಅವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಮತ್ತು ಆಪ್ತರು ಸಂಶಯ ವ್ಯಕ್ತಪಡಿಸಿದ್ದಾರೆ.


