ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರ ನಿಗೂಢ ಸಾವು ಈಗ ಕೇವಲ ಉದ್ಯಮ ಲೋಕಕ್ಕಷ್ಟೇ ಸೀಮಿತವಾಗಿಲ್ಲ, ಬದಲಾಗಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಈ ಸಾವಿನ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ರಾಯ್ ಅವರೇ ಗುಂಡು ಹೊಡೆದುಕೊಂಡಿದ್ದಾರಾ ಅಥವಾ ಯಾರಾದರೂ ಅವರಿಗೆ ಗುಂಡು ಹೊಡೆದಿದ್ದಾರಾ?ಎಂಬ ಪ್ರಶ್ನೆಯನ್ನು ಎತ್ತುವ ಮೂಲಕ ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಇಲ್ಲದಿರುವುದು ಮತ್ತು ಕೇವಲ ಐಟಿ ಅಧಿಕಾರಿಗಳಷ್ಟೇ ಅಲ್ಲಿ ಹಾಜರಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ಕಿಡಿಕಾರಿದ್ದಾರೆ.
ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಪ್ರದೀಪ್ ಈಶ್ವರ್, ಮುಂಬರುವ ಚುನಾವಣೆಗಾಗಿ ಬಿಜೆಪಿಯವರು ರಾಯ್ ಅವರಿಂದ ನೂರಾರು ಕೋಟಿ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಿ, ಕಳೆದ ಒಂದು ತಿಂಗಳಿನಿಂದ ಐಟಿ ಮೂಲಕ ಕಿರುಕುಳ ನೀಡಲಾಗಿದೆ. ಒಬ್ಬ ಸಾಮಾನ್ಯ ಮನುಷ್ಯ ಪ್ರಾಮಾಣಿಕವಾಗಿ ಹಣ ಸಂಪಾದನೆ ಮಾಡುವುದನ್ನು ನೋಡಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ಈ ಭ್ರಷ್ಟಾಚಾರದ ಸಂಸ್ಕೃತಿಯಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರ ಮೌನವನ್ನು ಪ್ರಶ್ನಿಸಿರುವ ಶಾಸಕರು, ಪ್ರತಿಯೊಂದು ವಿಷಯಕ್ಕೂ ಬಾಯಿ ಬಡಿಯುವ ಆರ್. ಅಶೋಕ್, ಸುನೀಲ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮೈಸೂರಿನ ಪ್ರತಾಪ್ ಸಿಂಹ ಅವರು ಒಬ್ಬ ಪ್ರಭಾವಿ ಉದ್ಯಮಿಯ ಸಾವಿನ ಬಗ್ಗೆ ಯಾಕೆ ಮೌನಕ್ಕೆ ಶರಣಾಗಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ರಾಯ್ ಅವರಿಗೆ ಯಾವುದೇ ಆರ್ಥಿಕ ಅಥವಾ ವೈಯಕ್ತಿಕ ಸಮಸ್ಯೆಗಳಿರಲಿಲ್ಲ, ಐಟಿ ಇಲಾಖೆಯ ನಿರಂತರ ಕಿರುಕುಳವೇ ಅವರ ಸಾವಿಗೆ ಪ್ರೇರಣೆಯಾಗಿದೆ ಎಂಬುದು ಪ್ರದೀಪ್ ಈಶ್ವರ್ ಅವರ ಬಲವಾದ ವಾದವಾಗಿದೆ.
ಕೊನೆಯದಾಗಿ, ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ರಾಜ್ಯ ಸರ್ಕಾರದಿಂದ ಎಸ್‌ಐಟಿ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕೇಂದ್ರದ ಅಧೀನದಲ್ಲಿರುವ ಸಿಬಿಐ ಮೇಲೆ ನಮಗೆ ನಂಬಿಕೆಯಿಲ್ಲ, ಅಲ್ಲಿ ನ್ಯಾಯ ಸಿಗುವ ಸಾಧ್ಯತೆ ಕಡಿಮೆ. ಹೀಗಾಗಿ ರಾಜ್ಯ ಪೊಲೀಸರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ. ಪ್ರದೀಪ್ ಈಶ್ವರ್ ಅವರ ಈ ಹೇಳಿಕೆಯು ಈಗ ರಾಜಕೀಯ ವಲಯದಲ್ಲಿ ಕಿಚ್ಚು ಹಚ್ಚಿದ್ದು, ಬಿಜೆಪಿ ನಾಯಕರ ಪ್ರತಿಕ್ರಿಯೆಗಾಗಿ ರಾಜ್ಯ ಕಾದು ನೋಡುತ್ತಿದೆ.


