ಉದ್ಯಮಿ ರಾಯ್ ಸಾವಿನ ಪ್ರಕರಣದ ಸುತ್ತ ಅನುಮಾನದ ಹುತ್ತಗಳಿದ್ದು ಕೇವಲ ಅನುಮಾನಾಸ್ಪದ ಸಾವಿನ ತನಿಖೆಯಲ್ಲದೆ, ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ಇನ್ನಷ್ಟು ಹೆಚ್ಚಿಸಿದೆ . ಈ ಪ್ರಕರಣದ ವಿಚಾರ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದು, ತನಿಖಾ ಸಂಸ್ಥೆಗಳ ಕಾರ್ಯ ಮತ್ತು ಉದ್ದೇಶಗಳ ಮೇಲೆ ಸಾರ್ವಜನಿಕ ಅನುಮಾನ ವ್ಯಕ್ತವಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಹಣಕಾಸಿನ ನೆರವು ನೀಡುವ ಉದ್ಯಮಿಗಳು ಮತ್ತು ವ್ಯಕ್ತಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿವೆ. ಐಟಿ ಅಧಿಕಾರಿಗಳ ನಿರಂತರ ದಾಳಿಗಳು ಮತ್ತು ಒತ್ತಡದಿಂದಾಗಿ ರಾಯ್ ಅವರು ಮಾನಸಿಕವಾಗಿ ನಲುಗಿದ್ದರು ಎನ್ನಲಾಗಿದ್ದು, ದೇಶ ತೊರೆಯುವ ಮತ್ತು ಬೇರೆ ದೇಶದ ಪೌರತ್ವ ಪಡೆಯುವ ಬಗ್ಗೆ ಚಿಂತನೆ ನಡೆಸಿದ್ದರು ಎಂಬ ಮಾಹಿತಿ ಈ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.
ರಾಯ್ ಅವರ ಆಪ್ತ ಚಂದ್ರಚೂಡ್ ಅವರ ಹೇಳಿಕೆಯಂತೆ, ಐಟಿ ಇಲಾಖೆಯ ನಿರಂತರ ಒತ್ತಡವೇ ರಾಯ್ ಅವರ ಮೇಲೆ ತೀವ್ರ ಪ್ರಭಾವ ಬೀರಿತ್ತು. ಆರ್ಥಿಕವಾಗಿ ಸ್ಥಿರವಾಗಿದ್ದ ಉದ್ಯಮಿಯೊಬ್ಬರು ಈ ಹಂತಕ್ಕೆ ತಲುಪಿದ್ದು ಏಕೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕೇಳಿಬರುತ್ತಿದೆ. ಇದು ಕೇವಲ ಕಾನೂನು ಕ್ರಮವೇ ಅಥವಾ ಉದ್ದೇಶಿತ ಒತ್ತಡವೇ ಎಂಬ ಚರ್ಚೆ ಜೋರಾಗಿದೆ.
ಸಿಬಿಐ ತನಿಖೆ ಕುರಿತೂ ಅವರು ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ತನಿಖಾ ಸಂಸ್ಥೆಗಳಲ್ಲೇ ‘ಬೇಟೆಗಾರರು’ ಕುಳಿತಿದ್ದಾರೆ ಎಂಬ ಹೇಳಿಕೆ ವ್ಯವಸ್ಥೆಯ ನಿಷ್ಪಕ್ಷಪಾತತೆಯ ಮೇಲೆ ದೊಡ್ಡ ಪ್ರಶ್ನೆ ಎಬ್ಬಿಸಿದೆ.ರಾಯ್ ಪ್ರಕರಣದ ಸತ್ಯಾಸತ್ಯತೆ ಯಾವ ತನಿಖೆಯಿಂದ ಹೊರಬರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ತನಿಖೆಯ ದಿಕ್ಕು ಈ ಪ್ರಕರಣದ ಭವಿಷ್ಯವನ್ನು ಮಾತ್ರವಲ್ಲ, ಸಾರ್ವಜನಿಕ ವಿಶ್ವಾಸವನ್ನೂ ನಿರ್ಧರಿಸಲಿದೆ.


