ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಡಿಜಿಟಲ್ ಸಮರ ತಾರಕಕ್ಕೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಸಚಿವರನ್ನು ಗುರಿಯಾಗಿಸಿಕೊಂಡು ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪ್ರಕಟವಾದ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್ ಈಗ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದೆ. ಈ ಅವಹೇಳನಕಾರಿ ಪೋಸ್ಟ್ ವಿರುದ್ಧ ಕಾಂಗ್ರೆಸ್ ಕಾನೂನು ಘಟಕವು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ವಿವಾದದ ಕಿಡಿ ಹಚ್ಚಿದ ಆ ಪೋಸ್ಟ್‌ನಲ್ಲಿ ಏನಿದೆ?
ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಸಿಎಂ ಮತ್ತು ಡಿಸಿಎಂ ಅವರ ಚಿತ್ರಗಳನ್ನು ಒಳಗೊಂಡ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಪೋಸ್ಟರ್‌ಗೆ “ಸ್ಕ್ಯಾಮ್ ಲಾರ್ಡ್” (ಹಗರಣಗಳ ಪ್ರಭುಗಳು) ಎಂಬ ಶೀರ್ಷಿಕೆ ನೀಡಲಾಗಿದ್ದು, “ಇದು ಕರ್ನಾಟಕವನ್ನು ಹಗಲಿರುಳು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಹಗರಣ ಸಾಮ್ರಾಜ್ಯದ ನಿಜವಾದ ಕಥೆ” ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ. ಇದು ಕೇವಲ ಹಗರಣಗಳ ಕಥೆಯಲ್ಲ, ಇವರ ಹಿಂದಿನ ಕರಾಳ ಕೃತ್ಯಗಳ ಕಥೆ” ಎಂಬ ಒಕ್ಕಣೆಯನ್ನು ಪೋಸ್ಟ್‌ನಲ್ಲಿ ಬಳಸಲಾಗಿದೆ.
ಬಿಜೆಪಿ ವಿರುದ್ಧ ಕೆಪಿಸಿಸಿ ಪರವಾಗಿ ವಕೀಲರ ತಂಡವು ದಾಖಲಿಸಿರುವ ದೂರಿನಲ್ಲಿ ಗಂಭೀರ ಅಂಶಗಳನ್ನು ಉಲ್ಲೇಖಿಸಲಾಗಿದೆ. ‘ಲೂಟಿ’ ಮತ್ತು ‘ಸ್ಕ್ಯಾಮ್’ ಎಂಬ ಪದಗಳನ್ನು ಪದೇ ಪದೇ ಬಳಸುವ ಮೂಲಕ ಸಾಂವಿಧಾನಿಕ ಹುದ್ದೆಯಲ್ಲಿರುವವರ ವ್ಯಕ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ. ಇದು ಕೇವಲ ರಾಜಕೀಯ ಟೀಕೆಯಲ್ಲ, ಬದಲಾಗಿ ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಲು ಮತ್ತು ಸರ್ಕಾರಕ್ಕೆ ಮಸಿ ಬಳಿಯಲು ಮಾಡಿರುವ ವ್ಯವಸ್ಥಿತ ಪಿತೂರಿ ಎಂದು ಕಾಂಗ್ರೆಸ್ ಆರೋಪಿಸಿದೆ. ಸಮಾಜದ ಶಾಂತಿಯನ್ನು ಕದಡುವ ಇಂತಹ ಪ್ರಚೋದನಾಕಾರಿ ಪೋಸ್ಟ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಸದನದಲ್ಲಿ ಪ್ರತಿಧ್ವನಿಸಿದ ಹಗರಣದ ಸದ್ದು
ಈ ಡಿಜಿಟಲ್ ಕಿಡಿ ಕೇವಲ ಜಾಲತಾಣಕ್ಕೆ ಸೀಮಿತವಾಗದೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ಪೋಸ್ಟ್ ಪ್ರಕಟವಾದ ಬೆನ್ನಲ್ಲೇ ವಿರೋಧ ಪಕ್ಷ ಬಿಜೆಪಿ, ಸದನದಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ವೈಫಲ್ಯದ ಬಗ್ಗೆ ಚರ್ಚೆ ಆರಂಭಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.


