ಕರ್ನಾಟಕ ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ, ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷಗಳ ಕಾಲ ಸಡಿಲಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ವಯೋಮಿತಿ ಸಡಿಲಿಕೆ 2027ರ ಡಿಸೆಂಬರ್ 31ರವರೆಗೆ ಹೊರಡಿಸಲಾಗುವ ನೇಮಕಾತಿ ಅಧಿಸೂಚನೆಗಳಿಗೆ ಮಾತ್ರ ಅನ್ವಯವಾಗಲಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಇರುವ 35 ವರ್ಷಗಳ ಗರಿಷ್ಠ ವಯೋಮಿತಿ 40 ವರ್ಷಗಳಿಗೆ ಹೆಚ್ಚಳವಾಗಲಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಇರುವ 38 ವರ್ಷಗಳ ವಯೋಮಿತಿ 43 ವರ್ಷಗಳಿಗೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಇರುವ 40 ವರ್ಷಗಳ ವಯೋಮಿತಿ 45 ವರ್ಷಗಳಿಗೆ ವಿಸ್ತರಿಸಲಾಗುತ್ತದೆ.
ಕಳೆದ ಕೆಲವು ವರ್ಷಗಳಿಂದ ಒಳ ಮೀಸಲಾತಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ರಾಜ್ಯದಲ್ಲಿ ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗಿದ್ದವು. ಇದರ ಪರಿಣಾಮವಾಗಿ ಅನೇಕ ಉದ್ಯೋಗಾಕಾಂಕ್ಷಿಗಳು ವಯೋಮಿತಿ ಮೀರಿದ್ದು, ಸರ್ಕಾರಿ ಉದ್ಯೋಗಗಳಿಂದ ವಂಚಿತರಾಗುವ ಪರಿಸ್ಥಿತಿ ಎದುರಿಸುತ್ತಿದ್ದರು.
ಈ ಹಿನ್ನೆಲೆ ವಯೋಮಿತಿಯನ್ನು ಸಡಿಲಗೊಳಿಸುವಂತೆ ಅಭ್ಯರ್ಥಿಗಳಿಂದ ಸರ್ಕಾರದ ಮೇಲೆ ನಿರಂತರ ಒತ್ತಡ ಇತ್ತು. ಪರಿಗಣಿಸಿದ ಸರ್ಕಾರ 2025ರ ಸೆಪ್ಟೆಂಬರ್ 29ರಂದು ಗರಿಷ್ಠ ವಯೋಮಿತಿಯನ್ನು 3 ವರ್ಷಗಳ ಕಾಲ ಸಡಿಲಿಕೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ವಯೋಮಿತಿ ಸಡಿಲಿಕೆಯನ್ನು 5 ವರ್ಷಗಳಿಗೆ ಹೆಚ್ಚಿಸಬೇಕೆಂಬ ಬೇಡಿಕೆ ಹೆಚ್ಚಾಗಿತ್ತು.
ಈ ಬೇಡಿಕೆಯನ್ನು ಮನಗಂಡು, ಕಳೆದ ಸಚಿವ ಸಂಪುಟ ಸಭೆಯಲ್ಲಿ ಒಂದು ಬಾರಿ ಮಾತ್ರ ಅನ್ವಯಿಸುವಂತೆ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷಗಳಿಗೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಇದೀಗ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಈ ನಿರ್ಧಾರದಿಂದಾಗಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸಿವಿಲ್ ಸೇವೆಯಲ್ಲಿ ಕೆಲಸ ಮಾಡುವ ಮತ್ತೊಂದು ಅವಕಾಶ ಲಭ್ಯವಾಗಲಿದೆ.


