ಬೆಂಗಳೂರು: ಕೇಂದ್ರ ಸರ್ಕಾರದ ನೂತನ ‘ಜಿ ರಾಮ್ ಜಿ’ ಕಾಯ್ದೆಯು ಮಹಾತ್ಮ ಗಾಂಧೀಜಿಯವರ ಕನಸಿನ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ಲಕ್ಷಾಂತರ ಕಾರ್ಮಿಕರ ಬದುಕಿನ ಮೇಲೆ ನೇರ ದಾಳಿ ನಡೆಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ನೂತನ ಕಾನೂನು ಕೃಷಿ ಕಾಯ್ದೆಗಳಷ್ಟೇ ಅಪಾಯಕಾರಿ ಎಂದು ಬಣ್ಣಿಸಿದರು. ಈ ಹಿಂದೆ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯ ಮಟ್ಟದಲ್ಲಿ ನಿರ್ಧಾರವಾಗುತ್ತಿದ್ದ ಕಾಮಗಾರಿಗಳ ಹಕ್ಕನ್ನು ಕೇಂದ್ರ ಕಿತ್ತುಕೊಂಡಿದೆ. ಇನ್ನು ಮುಂದೆ ದೆಹಲಿಯಿಂದಲೇ ಎಲ್ಲವೂ ತೀರ್ಮಾನವಾಗಲಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಡಿಕೆಶಿ ಟೀಕಿಸಿದರು.
ನನ್ನ ಕ್ಷೇತ್ರದಲ್ಲಿ ಮನರೇಗಾ ಮೂಲಕ 54 ಸಾವಿರ ದನದ ಕೊಟ್ಟಿಗೆ, ನೂರಾರು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇಂಗುಗುಂಡಿ, ಆಶ್ರಯ ಮನೆ ಮತ್ತು ಜಮೀನು ಅಭಿವೃದ್ಧಿಯಂತಹ ಕೆಲಸಗಳಿಗೆ ರೈತರಿಗೆ ನೇರ ಕೂಲಿ ಸಿಗುತ್ತಿತ್ತು. ಹೊಸ ಕಾಯ್ದೆಯಿಂದ ಈ ಎಲ್ಲ ಸೌಲಭ್ಯಗಳು ಕಾರ್ಮಿಕರಿಂದ ದೂರವಾಗಲಿವೆ,” ಎಂದು ಆತಂಕ ವ್ಯಕ್ತಪಡಿಸಿದರು.
ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದ ಮಾದರಿಯಲ್ಲೇ, ಕೇಂದ್ರ ಸರ್ಕಾರ ಮನರೇಗಾ ಕುರಿತಾದ ಈ ನೂತನ ನಿಯಮಗಳನ್ನೂ ಕೈಬಿಡಬೇಕು. ಈ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಸಿ, ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದರು.
ಇನ್ನು ಸರ್ಕಾರದ ಜಾಹೀರಾತು ವೆಚ್ಚದ ಬಗ್ಗೆ ಬಿಜೆಪಿಯ ಆರೋಪಗಳಿಗೆ ತಿರುಗೇಟು ನೀಡಿದ ಅವರು, “ಜನರಿಗೆ ಯೋಜನೆಗಳ ಅನುಕೂಲ ಮತ್ತು ಅನಾನುಕೂಲಗಳನ್ನು ತಿಳಿಸುವುದು ಸರ್ಕಾರದ ಜವಾಬ್ದಾರಿ. ಇದರಲ್ಲಿ ದುಂದುವೆಚ್ಚದ ಪ್ರಶ್ನೆಯೇ ಇಲ್ಲ,” ಎಂದರು. ಅಲ್ಲದೆ, ತಮ್ಮ ವಿರುದ್ಧದ ಸೋಷಿಯಲ್ ಮೀಡಿಯಾ ಟ್ರೋಲ್‌ಗಳ ಬಗ್ಗೆ ವ್ಯಂಗ್ಯವಾಡಿದ ಅವರು, ವಿರೋಧ ಪಕ್ಷಗಳು ಸಣ್ಣತನದ ರಾಜಕಾರಣ ಬಿಟ್ಟು ಜನರ ಸಮಸ್ಯೆಗಳತ್ತ ಗಮನಹರಿಸಲಿ ಎಂದು ಕಿವಿಮಾತು ಹೇಳಿದರು.


