ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಟಕ್ಕಳಕಿ ಗ್ರಾಮದಲ್ಲಿ ಭಾನುವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ತಂತಿ ತಗುಲಿದ್ದರಿಂದ ಕಬ್ಬಿನ ಸೊಪ್ಪು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಧಗಧಗನೆ ಹೊತ್ತಿ ಉರಿದು ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಟಕ್ಕಳಕಿಯಿಂದ ಸಾವಳಗಿ ಕಡೆಗೆ ಟ್ರ್ಯಾಕ್ಟರ್ ಸಾಗುತ್ತಿದ್ದ ವೇಳೆ ಮೇಲಿಂದ ಹಾದು ಹೋಗಿದ್ದ ವಿದ್ಯುತ್ ತಂತಿ ಕಬ್ಬಿನ ಸೊಪ್ಪಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಟ್ರ್ಯಾಕ್ಟರ್ ಎಂಜಿನ್ ಹಾಗೂ ಟ್ರೇಲರ್‌ಗೆ ವ್ಯಾಪಿಸಿ ಭಾರೀ ಅಗ್ನಿ ಅವಘಡಕ್ಕೆ ಕಾರಣವಾಗಿದೆ.
ವಸಂತ ಚೌಹಾಣ್ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಹಾಗೂ ಟ್ರೇಲರ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಸ್ಥಳೀಯರು ಬೆಂಕಿ ಆರಿಸಲು ಹರಸಾಹಸ ಪಟ್ಟರೂ ಬೆಂಕಿಯ ತೀವ್ರತೆಯಿಂದ ನಿಯಂತ್ರಣ ಸಾಧ್ಯವಾಗಲಿಲ್ಲ. ಈ ಅವಘಡದಲ್ಲಿ ಟ್ರ್ಯಾಕ್ಟರ್ ಎಂಜಿನ್, ಟ್ರೇಲರ್ ಹಾಗೂ ಕಬ್ಬಿನ ಸೊಪ್ಪು ಸೇರಿ ಸುಮಾರು 8 ರಿಂದ 9 ಲಕ್ಷ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


