ಬೆಂಗಳೂರು: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಫೋನ್ ಕರೆಗಳನ್ನು ರಾಜ್ಯ ಸರ್ಕಾರ ಕದ್ದಾಲಿಸುತ್ತಿದೆ ಎಂಬ ವಿರೋಧ ಪಕ್ಷದ ನಾಯಕರ ಆರೋಪವನ್ನು ಗೃಹ ಸಚಿವ ಜಿ. ಪರಮೇಶ್ವರ ಅವರು ನಿರಾಕರಿಸಿದ್ದಾರೆ. “ನಮಗೆ ಫೋನ್ ಟ್ಯಾಪಿಂಗ್ ಮಾಡುವ ಅಗತ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ತಮ್ಮ ಭಾಷಣವನ್ನು ಕೇವಲ ಮೂರು ಸಾಲುಗಳಿಗೆ ಸೀಮಿತಗೊಳಿಸಿ ಓದಿದ್ದರು. ಈ ಕುರಿತ ಚರ್ಚೆಯ ಸಂದರ್ಭದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ್, “ರಾಜ್ಯಪಾಲರು ದೆಹಲಿಯಿಂದ ದೂರವಾಣಿ ಮೂಲಕ ಸೂಚನೆಗಳನ್ನು ಪಡೆಯುತ್ತಿರುವಂತೆ ತೋರುತ್ತಿದೆ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ, “ರಾಜ್ಯಪಾಲರ ಫೋನ್ ಕದ್ದಾಲಿಕೆ ಮಾಡದೆ ಅವರಿಗೆ ದೆಹಲಿಯಿಂದ ಕರೆ ಬಂದಿರುವುದು ಸರ್ಕಾರಕ್ಕೆ ಹೇಗೆ ತಿಳಿಯಿತು?” ಎಂದು ಪ್ರಶ್ನಿಸಿ ಗದ್ದಲವೆಬ್ಬಿಸಿತ್ತು.
ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಜಿ. ಪರಮೇಶ್ವರ ಅವರು, “ನಾವು ಯಾರ ಫೋನ್ ಕದ್ದಾಲಿಕೆಯನ್ನೂ ಮಾಡಿಲ್ಲ, ಆ ಕೆಲಸ ನಮಗೆ ಬೇಕಾಗಿಲ್ಲ. ಬಿಜೆಪಿ ನಾಯಕರು ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ್ದನ್ನೇ ಈಗ ನಾವು ಮಾಡುತ್ತಿದ್ದೇವೆ ಎಂಬಂತೆ ಬಿಂಬಿಸುತ್ತಿದ್ದಾರೆ. ಮುಂಜಾನೆಯಿಂದ ಸಂಜೆಯವರೆಗೆ ಅವರು ನೂರಾರು ಆರೋಪಗಳನ್ನು ಮಾಡುತ್ತಾರೆ, ಅವೆಲ್ಲವಕ್ಕೂ ಉತ್ತರಿಸುವ ಅಗತ್ಯವಿಲ್ಲ ಎಂದರು.
ಇದೇ ವೇಳೆ, ಚಿಕ್ಕಮಗಳೂರಿನಲ್ಲಿ ಇನ್ನೂ ಜಾರಿಗೆ ಬಾರದ ಕಾನೂನನ್ನು ಉಲ್ಲೇಖಿಸಿ ನೋಟಿಸ್ ನೀಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು. “ಅಧಿಕಾರಿಗಳಿಗೆ ಹೊಸ ಕಾನೂನಿನ (BNS) ಬಗ್ಗೆ ತರಬೇತಿ ನೀಡಲಾಗುತ್ತಿದೆ. ತಪ್ಪು ನಡೆದಾಗ ನಾವು ಕ್ರಮ ಕೈಗೊಳ್ಳುತ್ತೇವೆ, ಆದರೆ ಅದು ಬಿಜೆಪಿಯ ಆರೋಪದ ಆಧಾರದ ಮೇಲೆ ಅಲ್ಲ” ಎಂದು ಅವರು ಸ್ಪಷ್ಟಪಡಿಸಿದರು.


