ಗದಗ : ಐತಿಹಾಸಿಕ ಲಕ್ಕುಂಡಿಯಲ್ಲಿ 12ನೇ ದಿನವೂ ಉತ್ಖನನ ಕಾರ್ಯ ಮುಂದುವರೆದಿದ್ದು, ಪ್ರತಿದಿನವೂ ಹೊಸ ಹೊಸ ಪ್ರಾಚ್ಯಾವಶೇಷಗಳು ಪತ್ತೆಯಾಗುತ್ತಿವೆ.
ಇತ್ತೀಚೆಗೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಉತ್ಖನನದ ವೇಳೆ ಅಪರೂಪದ 3 ಹೆಡೆಯ ನಾಗರ ಕಲ್ಲು ಪತ್ತೆಯಾಗಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.ಈ 12 ದಿನಗಳ ಉತ್ಖನನದಲ್ಲಿ ಒಂದಲ್ಲಾ ಒಂದು ಮಹತ್ವದ ಪುರಾತತ್ವ ಅವಶೇಷಗಳು ಬೆಳಕಿಗೆ ಬರುತ್ತಿದ್ದು, ಲಕ್ಕುಂಡಿಯ ಐತಿಹಾಸಿಕ ಮಹತ್ವ ಮತ್ತಷ್ಟು ಎತ್ತಿ ತೋರಿಸುತ್ತಿದೆ. ಇದೀಗ ಪತ್ತೆಯಾಗಿರುವ 3 ಹೆಡೆಯ ನಾಗರ ಮೂರ್ತಿ ಸ್ಥಳೀಯರ ಗಮನ ಸೆಳೆಯುವುದರ ಜೊತೆಗೆ, ಹಲವಾರು ಚರ್ಚೆಗಳಿಗೆ ಕಾರಣವಾಗಿದೆ.
ಸ್ಥಳೀಯರ ಪ್ರಕಾರ, ನಿಧಿ ಇರುವ ಸ್ಥಳದಲ್ಲಿ ನಾಗರಹಾವು ಇರುತ್ತದೆ ಎಂಬ ನಂಬಿಕೆ ಇದೆ. ಅದೇ ಕಾರಣಕ್ಕೆ ಇಲ್ಲಿ ನಾಗರ ಕಲ್ಲು ಸಿಕ್ಕಿದೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಈ ಪತ್ತೆ ಲಕ್ಕುಂಡಿಯಲ್ಲಿ ಯಾವುದೇ ನಿಧಿ ಅಥವಾ ವಿಶೇಷ ಮಹತ್ವದ ಸ್ಥಳ ಇರಬಹುದೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರವಾಸಿ ಮಿತ್ರ ಆಲಪ್ಪ ತುಳಿಸಿಮನಿ ಮಾತನಾಡಿ , ನಾಗರ ಸರ್ಪಗಳಲ್ಲಿ ಮೂರು ಹೆಡೆ, ಪಂಚಮುಖಿ ಹಾಗೂ ಸಪ್ತಮುಖಿ ನಾಗರಗಳ ಉಲ್ಲೇಖಗಳು ಪುರಾಣಗಳಲ್ಲಿ ಕಂಡುಬರುತ್ತವೆ ಇಂತಹ ನಾಗರ ಮೂರ್ತಿಗಳು ನಿಧಿ ಇರುವ ಸ್ಥಳವನ್ನು ಸೂಚಿಸುತ್ತವೆ ಎಂಬ ನಂಬಿಕೆ ಇರುವುದಾಗಿ ತಿಳಿಸಿದ್ದಾರೆ.
ಲಕ್ಕುಂಡಿಯಲ್ಲಿ ಪತ್ತೆಯಾಗಿರುವ ಈ 3 ಹೆಡೆಯ ನಾಗರ ಕಲ್ಲು, ಇಲ್ಲಿ ಲಕ್ಷ್ಮೀ ವಾಸಸ್ಥಾನ ಅಥವಾ ಸಂಪತ್ತಿನ ಸಂಕೇತ ಇರಬಹುದೆಂಬ ಸೂಚನೆಯಾಗಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಮುಂದಿನ ಉತ್ಖನನದಲ್ಲಿ ಇನ್ನಷ್ಟು ಮಹತ್ವದ ಪುರಾತತ್ವ ಸಿಕ್ಕಿಬೀಳುವ ನಿರೀಕ್ಷೆ ವ್ಯಕ್ತವಾಗಿದೆ.


