ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ನಟನಾ ಶೈಲಿಯಿಂದ ಗುರುತಿಸಿಕೊಂಡಿರುವ ರಾಜ್ ಬಿ ಶೆಟ್ಟಿ, ಒಂದೇ ಮಾದರಿಯ ಪಾತ್ರಗಳಿಗೆ ಸೀಮಿತವಾಗದೆ ವಿಭಿನ್ನ ಪ್ರಯೋಗಗಳಿಗೆ ಸದಾ ಸಿದ್ಧರಾಗಿರುವ ನಟ. ಹೀರೋ, ಕಾಮಿಡಿ ಪಾತ್ರ, ವಿಲನ್, ಸಾಮಾನ್ಯ ವ್ಯಕ್ತಿ ಹಾಗೂ ಅಂಗವಿಕಲ ಪಾತ್ರಗಳವರೆಗೆ ವಿಭಿನ್ನ ಛಾಯೆಗಳಲ್ಲಿ ಮಿಂಚಿರುವ ಶೆಟ್ಟಿ ಇದೀಗ ಮತ್ತೊಂದು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
‘ರಕ್ಕಸಪುರದೊಳ್’ ಎಂಬ ಮಾಸ್ ಥ್ರಿಲ್ಲರ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಾಯಕನಾಗಿ ಅಭಿನಯಿಸಿದ್ದು, ಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಹೆಸರೇ ಸೂಚಿಸುವಂತೆ, ಈ ಸಿನಿಮಾ ಒಂದು ಊರಿನಲ್ಲಿ ನಡೆಯುವ ರಹಸ್ಯಮಯ ಘಟನೆಗಳು ಮತ್ತು ಅದರ ಹಿಂದೆ ಅಡಗಿರುವ ಅಪರಾಧ ಕಥೆಯನ್ನು ತೆರೆ ಮೇಲೆ ತರುತ್ತದೆ. ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮೊದಲ ಬಾರಿಗೆ ಸಂಪೂರ್ಣ ಮಾಸ್ ಎಲಿವೇಷನ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಪೊಲೀಸ್ ಪಾತ್ರವಲ್ಲದೆ, ಗಡ್ಡ ಬಿಟ್ಟ, ಸದಾ ಕುಡಿತದ ಚಟ ಹೊಂದಿರುವ, ಎದುರಿಗೆ ಸಿಕ್ಕವರನ್ನು ಬಿಡದೆ ಹೊಡೆಯುವ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಇದು ಶೆಟ್ಟಿಯ ಹಿಂದಿನ ಪಾತ್ರಗಳಿಂದ ಸಂಪೂರ್ಣ ಭಿನ್ನವಾಗಿದೆ.
ಟ್ರೈಲರ್ ಗಮನ ಸೆಳೆಯುವಂತಿದ್ದು , ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಆಕ್ಷನ್ ಮತ್ತು ಹಾಸ್ಯದ ಅಂಶಗಳೂ ಸಿನಿಮಾದಲ್ಲಿ ಇರುವುದನ್ನು ಸೂಚಿಸುತ್ತದೆ. ರಾಜ್ ಬಿ ಶೆಟ್ಟಿಯ ಎಂಟ್ರಿ ದೃಶ್ಯಗಳು ಹಾಗೂ ಕೆಲವು ತೀವ್ರ ಆಕ್ಷನ್ ತುಣುಕುಗಳು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತವೆ. ವಿಶೇಷವೆಂದರೆ, ಕಥೆಯ ಹಂದರದಲ್ಲಿ, ಒಂದು ಊರಿನಲ್ಲಿ ಸರಣಿ ಕೊಲೆಗಳು ನಡೆಯುತ್ತಿದ್ದು, ಅವುಗಳ ಹಿಂದೆ ದೆವ್ವ ಅಥವಾ ಪಿಶಾಚಿಯ ಕೈವಾಡವಿದೆ ಎಂಬ ನಂಬಿಕೆ ಊರಿನ ಜನರಲ್ಲಿ ಮೂಡಿದೆ. ಈ ರಹಸ್ಯ ಕೊಲೆಗಳ ತನಿಖೆಗೆ ಬರುವ ಪೊಲೀಸ್ ಅಧಿಕಾರಿ ಪಾತ್ರದಲ್ಲೇ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ರಕ್ಕಸಪುರದೊಳ್’ ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡಿದ್ದು, ಕೆಎನ್ ಎಂಟರ್ಪ್ರೈಸಸ್ನ ರವಿ ವರ್ಮಾ ನಿರ್ಮಾಣ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಚಿತ್ರವನ್ನು ಪ್ರಸ್ತುತಪಡಿಸಿದೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಸ್ವಾತಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಸೇರಿದಂತೆ ಇನ್ನೂ ಹಲವು ಕಲಾವಿದರು ಅಭಿನಯಿಸಿದ್ದಾರೆ.ಸಿನಿಮಾ ಫೆಬ್ರವರಿ 6ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ, ಈಗ ಬಿಡುಗಡೆಯಾಗಿರುವ ಟ್ರೈಲರ್ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿದ್ದು, ರಾಜ್ ಬಿ ಶೆಟ್ಟಿಯ ಹೊಸ ಅವತಾರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


