ಹಾಸನ : ನಗರದ ಕೆ.ಆರ್.ಪುರಂ ಪ್ರದೇಶದಲ್ಲಿ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದ ಗಲಾಟೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಒಂದೇ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಇಬ್ಬರು ಪುರುಷರ ನಡುವಿನ ವೈಷಮ್ಯವೇ ಈ ದುರ್ಘಟನೆಗೆ ಕಾರಣವಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ಅಡುಗೆ ಕಂಟ್ರ್ಯಾಕ್ಟರ್ ಆನಂದ್ (48) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ಧರಣೇಂದ್ರಪ್ರಕಾಶ್ ಎಂದು ತಿಳಿದುಬಂದಿದೆ. ಆನಂದ್ ಮತ್ತು ಧರಣೇಂದ್ರಪ್ರಕಾಶ್ ಇಬ್ಬರೂ ಒಂದೇ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಇದೇ ವಿಚಾರಕ್ಕೆ ಮದ್ಯ ಸೇವಿಸುವ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆಯ ಬಳಿಕ ಇಬ್ಬರೂ ತಮ್ಮ ಮನೆಗಳಿಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆರೋಪಿ ಧರಣೇಂದ್ರಪ್ರಕಾಶ್, ಆನಂದ್‌ಗೆ ಫೋನ್ ಮಾಡಿ ಮಹಿಳೆಯ ಮನೆ ಬಳಿ ಬರುವಂತೆ ಕರೆಸಿಕೊಂಡಿದ್ದಾನೆ. ಆನಂದ್ ಗಾಡಿಯಲ್ಲಿ ಸ್ಥಳಕ್ಕೆ ಬಂದ ಕೂಡಲೇ, ಆರೋಪಿ ಐದಾರು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿ ಧರಣೇಂದ್ರಪ್ರಕಾಶ್‌ನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.


