ಕೋಲ್ಕತ್ತಾ: ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಸತ್ಯಾಸತ್ಯತೆ ಹೊರಬರಲು ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೋಲ್ಕತ್ತಾದಿಂದ ಸಿಂಗೂರ್‌ಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಂದ್ರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು. “ನಾವು ಸುಪ್ರೀಂ ಕೋರ್ಟ್ ಅನ್ನು ಮಾತ್ರ ನಂಬುತ್ತೇವೆ. ಅಸ್ತಿತ್ವದಲ್ಲಿರುವ ಇತರ ಎಲ್ಲ ಸಂಸ್ಥೆಗಳು ಸಂಪೂರ್ಣವಾಗಿ ರಾಜಿ ಮಾಡಿಕೊಂಡಿವೆ. ಸಾಮಾನ್ಯ ಕಾರ್ಯವಿಧಾನಗಳ ಮೂಲಕ ಈ ಅಪಘಾತದ ಹಿಂದಿನ ನೈಜ ಸತ್ಯ ಹೊರಬರಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುವ ತನಿಖೆ ಮಾತ್ರ ವಿಶ್ವಾಸಾರ್ಹವಾಗಿರುತ್ತದೆ,” ಎಂದು ಗುಡುಗಿದ್ದಾರೆ.
ಅಜಿತ್ ಪವಾರ್ ಅವರ ಸಾವಿನಿಂದ ತಮಗೆ ತೀವ್ರ ಆಘಾತವಾಗಿದೆ. ದೇಶದ ರಾಜಕೀಯ ನಾಯಕರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಈ ದೇಶದಲ್ಲಿ ರಾಜಕೀಯ ನಾಯಕರಿಗೂ ಸುರಕ್ಷತೆ ಇಲ್ಲದಂತಾಗಿದೆ. ಇಂದು ಆಡಳಿತ ವ್ಯವಸ್ಥೆಯ ಭಾಗವಾಗಿರುವವರು ಸಹ ಸುರಕ್ಷಿತವಾಗಿರುವಂತೆ ಕಾಣುತ್ತಿಲ್ಲ,” ಎಂದು ಕಿಡಿಕಾರಿದ್ಧಾರೆ..


