ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರ ಗೌಡ ಮತ್ತು ಇಬ್ಬರು ಆರೋಪಿಗಳಿಗೆ ಸಿಕ್ಕಿದ್ದ ‘ಮನೆಯೂಟ’ದ ಸವಲತ್ತಿಗೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ.
ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡುವ ಮೂಲಕ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಬಲವಾದ ಸಂದೇಶವನ್ನು ರವಾನಿಸಿದೆ. ಆರೋಪಿಗಳಾದ ಪವಿತ್ರ ಗೌಡ, ಲಕ್ಷ್ಮಣ್ ಹಾಗೂ ನಾಗರಾಜ್ ಅವರಿಗೆ ಮನೆಯೂಟಕ್ಕೆ ಅನುಮತಿ ನೀಡಿದ್ದ 57ನೇ ಸಿಸಿಹೆಚ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು ಈ ಮಹತ್ವದ ತಡೆಯಾಜ್ಞೆ ನೀಡಿದೆ. ಅಲ್ಲದೆ, ಈ ಕುರಿತು ಮೂವರಿಗೂ ನೋಟಿಸ್ ಜಾರಿ ಮಾಡಿದೆ.
ವಿಚಾರಣೆಯ ವೇಳೆ ನ್ಯಾಯಪೀಠವು ಜೈಲಿನ ಆಹಾರದ ಗುಣಮಟ್ಟದ ಬಗ್ಗೆ ಪ್ರಸ್ತಾಪಿಸಿತು. ಜೈಲಿನಲ್ಲಿ ನೀಡಲಾಗುವ ಆಹಾರವು ಕಳಪೆಯಾಗಿಲ್ಲ, ಬದಲಾಗಿ ಎಫ್‌ಎಸ್‌ಎಸ್‌ಎಐ (FSSAI) ಕಡೆಯಿಂದ ‘4 ಸ್ಟಾರ್’ ರೇಟಿಂಗ್ ಪಡೆದಿದೆ. ಇಂತಹ ಗುಣಮಟ್ಟದ ಆಹಾರ ಲಭ್ಯವಿರುವಾಗ ಆರೋಪಿಗಳಿಗೆ ವಿಶೇಷವಾಗಿ ಮನೆಯೂಟದ ಅಗತ್ಯವೇನಿದೆ ಎಂದು ಕೋರ್ಟ್ ಪ್ರಶ್ನಿಸಿದೆ.
ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಕೈದಿಗಳಿಗೆ ಮನೆಯೂಟ ನೀಡುವುದು ಜೈಲು ಕೈಪಿಡಿಯ (Prison Manual) ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸವಲತ್ತು ನೀಡುವುದು ಸುಪ್ರೀಂ ಕೋರ್ಟ್ ಆದೇಶಗಳಿಗೂ ವಿರುದ್ಧವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಡ್ವೋಕೇಟ್ ಜಗದೀಶ್ ಅವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಆರೋಪಿಗಳು ಜೈಲಿನ ಆಹಾರವನ್ನೇ ಸೇವಿಸುವುದು ಅನಿವಾರ್ಯವಾಗಿದೆ.


