Monday, January 26, 2026
21.1 C
Bengaluru
Google search engine
LIVE
ಮನೆ#Exclusive NewsTop Newsಬಿಎಂಆರ್‌ಸಿಎಲ್ ದರ ಏರಿಕೆ ಶಾಕ್? ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಬಿಎಂಆರ್‌ಸಿಎಲ್ ದರ ಏರಿಕೆ ಶಾಕ್? ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಬೆಂಗಳೂರು: ನಮ್ಮ ಮೆಟ್ರೋ ಈಗ ಮತ್ತೊಮ್ಮೆ ದರ ಏರಿಕೆಗೆ ಮುಂದಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಫೆಬ್ರವರಿಯಿಂದ ಜಾರಿಗೆ ಬರಲಿರುವ ಈ ದರ ಏರಿಕೆ ಪ್ರಕ್ರಿಯೆಯನ್ನು ವಿರೋಧಿಸಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ದರ ನಿಗದಿ ಸಮಿತಿಯ ಶಿಫಾರಸಿನಂತೆ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಶೇ. 5ರಷ್ಟು ದರವನ್ನು ಸ್ವಯಂಚಾಲಿತವಾಗಿ ಏರಿಕೆ ಮಾಡಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೇ ಕೆಲವು ಮಾರ್ಗಗಳಲ್ಲಿ ಶೇ. 71ರಷ್ಟು ದರ ಹೆಚ್ಚಳ ಮಾಡಿ ಬೆಂಗಳೂರಿಗರಿಗೆ ಆಘಾತ ನೀಡಿದ್ದ ಮೆಟ್ರೋ ನಿಗಮ, ಈಗ ಮತ್ತೆ ಜನರ ಜೇಬಿಗೆ ಕತ್ತರಿ ಹಾಕಲು ಹೊರಟಿರುವುದು ವಿವಾದಕ್ಕೆ ನಾಂದಿ ಹಾಡಿದೆ.

ನಮ್ಮ ಮೆಟ್ರೋ ದೇಶದಲ್ಲೇ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊಂದಿದೆ. ಪದೇ ಪದೇ ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದ ಪ್ರಯಾಣಿಕರಿಗೆ ಮತ್ತಷ್ಟು ಹೊರೆ ಆಗಲಿದೆ. ನಮ್ಮ ಮೆಟ್ರೋ ಟಿಕೆಟ್ ದರ ಫೆಬ್ರವರಿಯಿಂದ ಮತ್ತಷ್ಟು ಏರಿಕೆಯಾಗುವ ಕುರಿತು ಚರ್ಚೆ ನಡೆಯುತ್ತಿದ್ದು, ಈ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಬಿಎಂಆರ್‌ಸಿಎಲ್ ಮತ್ತೆ ಖಜಾನೆ ಭರ್ತಿಗೆ ಫೆಬ್ರವರಿಗೆ 5% ದರ ಏರಿಕೆ ಮಾಡಲು ಮುಂದಾಗಿದೆ. ಈ ಮೂಲಕ ಜನರ ಜೇಬಿಗೆ ಕತ್ತರಿ ಹಾಕೋಕೆ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೆಟ್ರೋಗೆ ದರ ನಿಗದಿ ಸಮಿತಿಯನ್ನು ಪುನರ್ ರಚಿಸಬೇಕು. ಬೆಂಗಳೂರು ಮೆಟ್ರೋ ದೇಶದಲ್ಲಿ ದುಬಾರಿ ಮೆಟ್ರೋ ಆಗಿದೆ. ಸಾಮಾನ್ಯ ಜನ ಮೆಟ್ರೋ ಬಳಸದ ರೀತಿ ಆಗಿದೆ ಎಂದಿದ್ದಾರೆ. ಜೊತೆಗೆ ಸಿಎಂ, ಡಿಸಿಎಂ ರಾಜ್ಯದ ಜನತೆ ಪರ ನಿಲ್ಲಬೇಕು. ಬೆಂಗಳೂರು ಮೆಟ್ರೋಗೆ ದರ ನಿಗದಿ ಸಮಿತಿ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ ಎಂದಿದ್ದಾರೆ.

ಇನ್ನು ಸೇವ್ ಬೆಂಗಳೂರು ಕಮಿಟಿ ಹಾಗೂ ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆ ಬಿಎಂಆರ್‌ಸಿಎಲ್ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಮುಂದಿನ ತಿಂಗಳಿಂದ ದರ ಏರಿಕೆ ಮಾಡಬಾರದು ಎಂದು ಒತ್ತಾಯಿಸಿದೆ. ಪದೇಪದೇ ದರ ಏರಿಕೆ ಪ್ರಯಾಣಿಕರ ಮೇಲೆ ಭಾರೀ ಹೊರೆ ಆಗುತ್ತಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಬೆಂಗಳೂರಿಗರು ಈ ದರ ಸಮರದ ಸಂಕಷ್ಟ ಎದುರಿಸುವಂತಾಗಿದೆ. ಫೆಬ್ರವರಿಯಲ್ಲಿ ಮೆಟ್ರೋ ದರ ಏರಿಕೆಯಾಗುತ್ತದೆಯೇ ಅಥವಾ ಸರ್ಕಾರದ ಹಸ್ತಕ್ಷೇಪದಿಂದ ಸಾರ್ವಜನಿಕರಿಗೆ ನಿರಾಳ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments