ಲಕ್ಕುಂಡಿ (ಗದಗ): ಚಾಲುಕ್ಯರ ವೈಭವದ ಸಂಕೇತವಾಗಿರುವ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಈಗ ಎಲ್ಲೆಲ್ಲೂ ನಿಧಿಯದ್ದೇ ಮಾತು. ಮನೆ ನಿರ್ಮಿಸಲು ಅಗೆಯುವಾಗ ಪತ್ತೆಯಾದ ಚಿನ್ನಾಭರಣಗಳ ಬೆನ್ನಲ್ಲೇ, ಈಗ ಸರ್ಕಾರವು ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಅಧಿಕೃತವಾಗಿ ಬೃಹತ್ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದೆ.

ಪೊಲೀಸ್ ಸರ್ಪಗಾವಲಿನಲ್ಲಿ ಲಕ್ಕುಂಡಿ
ನಿಧಿ ಪತ್ತೆಯಾದ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ, ನಿಧಿಗಳ್ಳರ ಹಾವಳಿ ತಡೆಯಲು ಜಿಲ್ಲಾಡಳಿತವು ದೇವಸ್ಥಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಉತ್ಖನನ ನಡೆಯುತ್ತಿರುವ ಸ್ಥಳವನ್ನು ಸಂಪೂರ್ಣವಾಗಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಕುತೂಹಲದಿಂದ ಜನ ದೌಡಾಯಿಸುತ್ತಿರುವುದರಿಂದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಈ ಭಾಗದಲ್ಲಿ ಫೋಟೋ ಅಥವಾ ವಿಡಿಯೋ ಚಿತ್ರೀಕರಿಸುವುದನ್ನು ಕಟ್ಟುನಿಟ್ಟಾಗಿ ತಡೆಯಲಾಗಿದೆ.
ಏನೇನು ಸಿಕ್ಕಿದೆ? ಈಗೇನು ನಡೆಯುತ್ತಿದೆ?
ಇತ್ತೀಚೆಗೆ ಸ್ಥಳೀಯ ಬಾಲಕ ಪ್ರಜ್ವಲ್ ರಿತ್ತಿ ಮನೆ ಕಟ್ಟಲು ಪಾಯ ಅಗೆಯುವಾಗ ತಾಮ್ರದ ಬಿಂದಿಗೆಯಲ್ಲಿ ಸುಮಾರು 470 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದವು. ಇದನ್ನು ಈ ಕುಟುಂಬವು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿತ್ತು. ಶುಕ್ರವಾರದಿಂದ (ಜ. 16) ಆರಂಭವಾದ ಉತ್ಖನನದ ಮೊದಲ ದಿನ, ಸುಮಾರು 48 ಮಂದಿ ಸಿಬ್ಬಂದಿ (15 ಮಹಿಳೆಯರು ಮತ್ತು 5 ಪುರುಷರ ತಂಡವೂ ಸೇರಿದಂತೆ) ಸ್ಥಳದ ಸ್ವಚ್ಛತಾ ಕಾರ್ಯ ಹಾಗೂ ಅಳತೆ ಕಾರ್ಯವನ್ನು ಪೂರೈಸಿದ್ದಾರೆ. ದೇವಸ್ಥಾನದ ಅಡಿಯಲ್ಲಿ ಹಾಗೂ ಸುತ್ತಮುತ್ತ ಬೃಹತ್ ನಿಧಿ ಇರುವ ಸಾಧ್ಯತೆ ಇರುವುದರಿಂದ, ಇಡೀ ಗ್ರಾಮದಲ್ಲಿ ಸಮಗ್ರ ಸಂಶೋಧನೆ ನಡೆಸಲು ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ.
ರಾಶಿ ರಾಶಿ ಚಿನ್ನ ಸಿಗುತ್ತಾ?
ಲಕ್ಕುಂಡಿಯು ಚಾಲುಕ್ಯರು, ಹೊಯ್ಸಳರು ಹಾಗೂ ವಿಜಯನಗರ ಅರಸರ ಕಾಲದ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿನ ‘ಸಿದ್ಧರ ಬಾವಿ’ ಹಾಗೂ ವೀರಭದ್ರ ದೇಗುಲದ ಆವರಣದಲ್ಲಿ ಇನ್ನೂ ಹೆಚ್ಚಿನ ಐತಿಹಾಸಿಕ ದಾಖಲೆಗಳು ಹಾಗೂ ಅಮೂಲ್ಯ ವಸ್ತುಗಳು ಸಿಗಬಹುದು ಎಂಬುದು ಪುರಾತತ್ವ ಇಲಾಖೆಯ ತಜ್ಞರ ನಿರೀಕ್ಷೆ. ಸುಮಾರು 10 ಅಡಿ ಆಳದವರೆಗೆ ಉತ್ಖನನ ನಡೆಸಲು ಯೋಜಿಸಲಾಗಿದೆ.
ಗಮನಾರ್ಹ ಸಂಗತಿ: 1962ರ ಕಾಯ್ದೆಯಂತೆ ಭೂಮಿಯಲ್ಲಿ ಸಿಗುವ ಯಾವುದೇ ನಿಧಿ ಸರ್ಕಾರಕ್ಕೆ ಸೇರಿದ್ದಾಗಿರುತ್ತದೆ. ನಿಧಿ ಒಪ್ಪಿಸಿದ ಕುಟುಂಬಕ್ಕೆ ಅದರ ಮೌಲ್ಯದ ಶೇ. 20ರಷ್ಟು ಹಣವನ್ನು ನೀಡಲು ಸರ್ಕಾರ ನಿರ್ಧರಿಸಿದೆ.


