ತುಮಕೂರು: ಸಚಿವ ಪರಮೇಶ್ವರ್ ಅವರು ರಾಜ್ಯದ ಸಿಎಂ ಆಗಬೇಕು. ಇದು ನನ್ನ ವೈಯಕ್ತಿಕ ಹಾಗೂ ಜಿಲ್ಲೆಯ ಜನರ ಆಶಯ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ..
ತುಮಕೂರಿನ ಹೆಗ್ಗೆರೆಯಲ್ಲಿ ರೇಲ್ವೆ ಮೇಲ್ಸೆತುವೆ ಕಾಮಗಾರಿಗೆ ಗುದ್ದಲಿ ಪೂಜೆ ಬಳಿಕ ವೇದಿಕೆ ಭಾಷಣ ವೇಳೆ ಕೇಂದ್ರ ಸಚಿವ ವಿ. ಸೋಮಣ್ಣ ತಮ್ಮ ಇಂಗಿತ ಹೊರಹಾಕಿದರು. ಪರಮೇಶ್ವರ್ ಅದೃಷ್ಟದ ಗೃಹ ಮಂತ್ರಿಯಾಗಿದ್ದಾರೆ. ಎಲ್ಲೋ ಒಂದು ಕಡೆ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಅನ್ನೋ ಆಸೆ ಇದೆ ಎಂದು ಹೇಳಿದರಲ್ಲದೇ ಇದನ್ನ ನಾನೊಬ್ಬನೇ ಹೇಳುತ್ತಿಲ್ಲ ತುಮಕೂರಿನ ಮಹಾಜನತೆಯ ಅಭಿಪ್ರಾಯ ಎಂದು ಅಭಿಪ್ರಾಯಿಸಿದರು.
ಈ ವೇಳೆ ಮಧ್ಯ ಪ್ರವೇಶ ಮಾಡಿದ ಶಾಸಕ ಸುರೇಶ್ ಗೌಡ, ಡಿಕೆಶಿಕೂಡಾ ಇದ್ದಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ ಹಣೆಬರಹ ಯಾರಿಗೆ ಗೊತ್ತು, ಹಣೆ ಬರಹದಂತೆ ಆಗಲಿ ಎಂದರು. ಇನ್ನು ಇದೇ ವೇಳೆ ಮುಖ್ಯಮಂತ್ರಿ ಆಗೋ ಅರ್ಹತೆಗಳು ಸೋಮಣ್ಣ ಅವರಿಗೆ ಇದೆ ಎಂದಿದ್ದಾರೆ. ಕೇಂದ್ರದ ಮಂತ್ರಿಗಳು ಕೈಗೆ ಸಿಗೋದೇ ಕಷ್ಟ. ರಾಜ್ಯದ 28 ಸಂಸದರನ್ನ ನಾನೂ ನೋಡಿದ್ದೇನೆ. ರಾಜಕೀಯ ಅನುಭವದಲ್ಲಿ ಸಾಕಷ್ಟು ನಾಯಕರನ್ನ ನೋಡಿದ್ದೇನೆ. ಎಷ್ಟೋ ಸಂಸದರು ಫೋನೇ ರಿಸೀವ್ ಮಾಡಲ್ಲ. ಸೋಮಣ್ಣ ಅವರಂತಹ ಸಂಸದರನ್ನ ಪಡೆದಿರೋದಕ್ಕೆ ತುಮಕೂರಿನ ಜನರು ಪುಣ್ಯ ಮಾಡಿದ್ದೇವೆ ಎಂದು ಸುರೇಶ್ ಗೌಡ ಕೊಂಡಾಡಿದ್ರು.


