ಬೆಂಗಳೂರು: ರಾಜ್ಯದಲ್ಲಿ ಚಳಿಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ನೀಡಿರುವ ಇತ್ತೀಚಿನ ಮುನ್ಸೂಚನೆ ಪ್ರಕಾರ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತೀವ್ರ ಶೀತದಲೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.. ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬೆಳಗಿನ ಜಾವ ತಾಪಮಾನ ತೀವ್ರವಾಗಿ ಇಳಿಕೆಯಾಗಿದ್ದು, ಚಳಿ ಜನರನನ್ಉ ಗಢಗಢ ನಡುಗಿಸುವಂತಾಗಿದೆ..
ಕರ್ನಾಟಕದ ದಕ್ಷಿಣ ಒಳನಾಡಿನ ಭಾಗಗಳಲ್ಲಿಯೂ ಸಹ ಶೀತಗಾಳಿ ಬೀಸುವ ಸಾಧ್ಯತೆ ಇದೆ. ಚಳಿಗಾಲ ಮುಂದುವರೆದಂತೆ ಬೆಂಗಳೂರಿನಲ್ಲಿ ತಾಪಮಾನ ಕಡಿಮೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಹಲವಾರು ಜಿಲ್ಲೆಗಳಾದ ಬೀದರ್, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ತೀವ್ರ ಶೀತಗಾಳಿ ಬೀಸಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಕೊಪ್ಪಳ, ಬಳ್ಳಾರಿ, ವಿಜಯನಗರ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ ಮತ್ತು ಕೋಲಾರದಂತಹ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಶೀತಗಾಳಿ ಬೀಸಲಿದೆ. ಮುಂದಿನ 5 ದಿನಗಳವರೆಗೆ ರಾಜ್ಯದಲ್ಲಿ ಶೀತ ವಾತಾವರ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ 12.9° ಸೆಲ್ಸಿಯಸ್ ತಾಪಮಾನವಿದ್ದು ಚಳಿ ಹೆಚ್ಚಾಗಲಿದೆ.
ಕರ್ನಾಟಕದಾದ್ಯಂತ ಮುಂದಿನ ಐದು ದಿನಗಳವರೆಗೆ ಶೀತ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ, ಉತ್ತರ ಒಳನಾಡಿನ ಕರ್ನಾಟಕದ ಹಲವಾರು ಜಿಲ್ಲೆಗಳು ಶೀತ ಅಲೆಯಂತಹ ಪರಿಸ್ಥಿತಿಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಐಎಂಡಿಯ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.


