ಪಣಜಿ: ಗೋವಾದಲ್ಲಿ ತಡರಾತ್ರಿ ಕ್ಲಬ್ವೊಂದರಲ್ಲಿ ಬೆಂಕಿ ದುರಂತ ಸಂಭವಿಸಿ 25 ಜನರು ಮೃತ ಪಟ್ಟಿದ್ದಾರೆ.. ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ, ಮೃತ ಕುಟುಂಬಸ್ಥರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ..
ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.. ಈ ಕುರಿತು ಪ್ರಧಾನಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.. ಇನ್ನು ಪರಿಸ್ಥಿತಿಯ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಜಿ ಅವರೊಂದಿಗೆ ಮಾತನಾಡಿದ್ದೇನೆ, ರಾಜ್ಯ ಸರ್ಕಾರ ಸಂತ್ರಸ್ತರಿಗೆ ಬೇಕಾಗಿರುವ ಎಲ್ಲ ಸಹಾಯ ನೀಡುತ್ತದೆ ಎಂದು ತಿಳಿಸಿದ್ಧಾರೆ..
ನಿನ್ನೆ ತಡರಾತ್ರಿ ಉತ್ತರ ಗೋವಾದ ಅರ್ಪೋರಾದಲ್ಲಿರುವ ರೋಮಿಯೋ ಲೇನ್‌ನ ಪ್ರಸಿದ್ಧ ನೈಟ್ಕ್ಲಬ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ಶಂಕೆ ವ್ಯಕ್ತವಾಗಿದ್ದು, ಸ್ಪೋಟದ ತೀವ್ರತೆಗೆ ಕೆಲವೇ ಸಕೆಂಡುಗಳಲ್ಲಿ ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿಕೊಂಡಿದೆ.. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬರಬೇಕಿದೆ..
ಇನ್ನು ದುರ್ಘಟನೆಗೆ ಪ್ರತಿಕ್ರಿಯೆ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಘಟನೆ ಕುರಿತು ತನಿಖೆ ಆದೇಶಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಗೋವಾದಲ್ಲಿ ಇಂದು ನಮಗೆಲ್ಲರಿಗೂ ಅತ್ಯಂತ ನೋವಿನ ದಿನ. ಅರ್ಪೋರಾದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡವು 25 ಜನರನ್ನು ಬಲಿ ತೆಗೆದುಕೊಂಡಿದೆ. ಊಹಿಸಲಾಗದ ನಷ್ಟವಾಗಿದ್ದು, ಘಟನೆ ಕುರಿತು ತೀವ್ರವಾಗಿ ದುಃಖಿತನಾಗಿದ್ದೇನೆ. ಎಲ್ಲಾ ಮೃತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಘಟನೆಗೆ ನಿಖರವಾದ ಕಾರಣ ಮತ್ತು ಅಗ್ನಿ ಸುರಕ್ಷತಾ ನಿಯಮಗಳು ಮತ್ತು ಕಟ್ಟಡ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ತನಿಖೆಯು ಪರಿಶೀಲಿಸುತ್ತದೆ. ತಪ್ಪಿತಸ್ಥರು ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ. ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.


