ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಹಿರಿಯ ನಟ ಎಂ.ಎಸ್ ಉಮೇಶ್ ಇಂದು ಇಹಲೋಕ ತ್ಯಾಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಉಮೇಶ್ (80) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ..
ಇತ್ತೀಚೆಗೆ ಉಮೇಶ್ ಅವರು ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಿಸಿದ್ದ ವೈದ್ಯರು ರೋಗವನ್ನು ಖಚಿತಪಡಿಸಿಕೊಂಡು, ಕಿಮೊಥೆರಪಿ ಹಾಗೂ ಇಮ್ಯೂನೋಥೆರಪಿ ಮೂಲಕ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಈಗ ಉಮೇಶ್ ನಿಧನರಾಗಿರುವುದು ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ನೋವುಂಟು ಮಾಡಿದೆ.
ಉಮೇಶ್ ಅವರು ಅಭಿನಯಿಸಿದ್ದ ‘ಕಮಲ್ ಶ್ರೀದೇವಿ’, ‘ಐ ಆ್ಯಮ್ ಗಾಡ್’ ಸಿನಿಮಾಗಳು ಇತ್ತೀಚೆಗೆ ಬಿಡುಗಡೆ ಆಗಿದ್ದವು. ಪೋಷಕ ಪಾತ್ರಗಳು ಹಾಗೂ ಹಾಸ್ಯ ಪಾತ್ರಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಉಮೇಶ್ ಅವರು ಅಭಿನಯಿಸಿದ್ದಾರೆ. 1945ರ ಏಪ್ರಿಲ್ 24ರಂದು ಮೈಸೂರಿನಲ್ಲಿ ಜನಿಸಿದ ಅವರು 1960ರಲ್ಲಿ ಬಿಆರ್ ಪಂಥುಲು ನಿರ್ದೇಶನದ ಮಕ್ಕಳ ರಾಜ್ಯ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.


