ಶಿವಮೊಗ್ಗ: ಮದುವೆಯಾದ ಏಳು ತಿಂಗಳಿಗೇ ನವ ವಿವಾಹಿತೆ ಡೆತ್ನೋಟ್ ಬರೆದಿಟ್ಟು ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ..
ಶಿವಮೊಗ್ಗ ಜಿಲ್ಲೆ ಭದ್ರವತಿ ತಾಲೂಕಿನಹಂಚಿನ ಸಿದ್ದಾಪುರ ಗ್ರಾಮದ 26 ವರ್ಷದ ಲತಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಗಂಡನ ಮನೆಯರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಲಾಗಿದ್ದು, ಕಳೆದ ಮೇ 14 ರಂದು ಶಿಕಾರಿಪುರ ತಾಲೂಕಿನ ದಿಂಡದಹಳ್ಳಿಯ ಗುರುರಾಜ್ ಜೊತೆ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಳು.
ಶಿವಮೊಗ್ಗದ ಭದ್ರಾ ಪ್ರಾಜೆಕ್ಟ್ ನಲ್ಲಿ ಇಂಜಿನಿಯರ್ ಆಗಿದ್ದ ಗುರುರಾಜ್ ಗೆ ಕೈ ತುಂಬಾ ವರದಕ್ಷಿಣೆ, ಸೂಟು, ಬೂಟು, ವಾಚ್, ಬಂಗಾರ ಸೇರಿದಂತೆ ಎಲ್ಲವನ್ನ ನೀಡಿ, ಮುದ್ದಿನ ಮಗಳನ್ನ ಲತಾ ಪೋಷಕರು, ಧಾರೆ ಎರೆದು, ಕೊಟ್ಟಿದ್ದರು. ಮಗಳ ಬಾಳು ಹಸನಾಗಿರಲಿ ಎಂದು ಹಾರೈಸಿದ್ದರು. ಅದೇ ರೀತಿ ಪತಿ ಗುರುರಾಜ್ ಒಳ್ಳೆಯ ವ್ಯಕ್ತಿ ಎಂದೇ ಭಾವಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆದರೆ, ಮದುವೆಯಾದ ಕೆಲವೇ ದಿನದಲ್ಲಿ ಪತಿ ಗುರುರಾಜ್ ಹಾಗೂ ಆತನ ಕುಟುಂಬಸ್ಥರ ನಿಜರೂಪ ಬಯಲಾಗಿದೆ.
ಲಕ್ಷಗಟ್ಟಲೇ ವರದಕ್ಷಿಣೆ, ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ಸೇರಿದಂತೆ ತಮ್ಮ ಸಾಮರ್ಥ್ಯಕ್ಕೆ ಮೀರಿ ಎಲ್ಲವನ್ನ ಅಳಿಯನಿಗೆ ಕೊಟ್ಟಿದ್ದರೂ, ಆತ ಹಾಗೂ ಆತನ ಕುಟುಂಬದವರ ಮತ್ತಷ್ಟು ದುಡ್ಡಿಗೆ ಬೇಡಿಕೆಯಿಟ್ಟಿದ್ದರು. ಇದರಿಂದ ಬೇಸತ್ತ ಲತಾ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಈ ಸಂಬಂಧ ಗಂಡ ಗುರುರಾಜ್ ಸೇರಿ ಐವರ ವಿರುದ್ಧ ಹೊಳೆಹೊನ್ನೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಾಟ್ಸಾಪ್ ಮೂಲಕ ಲತಾ ಸಂಬಂಧಿಕರಿಗೆ ಕಳುಹಿಸಿದ ಡೆತ್‌ನೋಟ್‌ನಲ್ಲಿ, ನನ್ನ ಸಾವಿಗೆ ಗುರುರಾಜ್ ಹಾಗೂ ಆ ಐವರೇ ಕಾರಣ, ಅವರಿಗೆ ಶಿಕ್ಷೆಯಾಗಬೇಕು. ಓದುತ್ತಿರುವವರು ನನಗೆ ನ್ಯಾಯ ಕೊಡಿಸಿ ಅಂತಾ ವಾಟ್ಸಾಪ್ನಲ್ಲಿ ಸಂದೇಶ ರವಾನಿಸಿದ್ದಾರೆ. ಡೆತ್ ನೋಟ್ ಸಂದೇಶವನ್ನು ಸಂಬಂಧಿಕರಿಗೆ ಕಳುಹಿಸಿದ್ದ ಲತಾ ಆ ಬಳಿಕ ನಾಪತ್ತೆಯಾಗಿದ್ದರು. ಈ ವಿಷಯ ತಿಳಿಯುತ್ತಲೇ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು, ಪೊಲೀಸ್ ಸಿಬ್ಬಂದಿಗಳ ಜೊತೆಯಲ್ಲಿ ಲತಾಗಾಗಿ ಹುಡುಕಾಟ ನಡೆಸಿದ್ದರು. ಹಂಚಿನ ಸಿದ್ದಾಪುರ ಬಳಿಯ ಭದ್ರಾ ನಾಲೆಯ ಬಳಿ ಲತಾರವರಿಗೆ ಸೇರಿದ ಬಳಿ ಬಟ್ಟೆ, ಮೊಬೈಲ್ ಪತ್ತೆಯಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆ ಮಾಡಿದ್ದಾರೆ.


