ನವದೆಹಲಿ: ನೌಗಾಮ್ ಪೊಳಿಸ್ ಠಾಣೆಯಲ್ಲಿ ಸಂಭವಿಸಿದ್ದ ಸ್ಫೋಟ ದುರದೃಷ್ಟಕರ ಆಕಸ್ಮಿಕ ಘಟನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..
ಗೃಹ ಸಚಿವಾಲಯದ ಜಮ್ಮು ಮತ್ತು ಕಾಶ್ಮೀರ ವಿಭಾಗದ ಜಂಟಿ ಕಾರ್ಯದರ್ಶಿ ಪ್ರಶಾಂತ್ ಲೋಖಂಡೆ ಸ್ಫೋಟದ ಕುರಿತ ಮಾಹಿತಿ ನೀಡಿದ್ದಾರೆ.. ಸಂಗ್ರಹಿಸಿದ್ದ ಸ್ಫೋಟಕದಿಂದ ಮಾದರಿಯನ್ನು ಹೊರ ತೆಗೆಯುವಾಗ ಸ್ಫೋಟ ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ..
ನವೆಂಬರ್ 14 ರಂದು ರಾತ್ರಿ 11:20 ಕ್ಕೆ ಪೊಲೀಸ್ ಠಾಣೆಯೊಳಗೆ ದುರದೃಷ್ಟಕರ ಆಕಸ್ಮಿಕ ಘಟನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಪೊಲೀಸರು ಉಗ್ರರ ಮಾಡ್ಯೂಲ್ ಪ್ರಕರಣವನ್ನು ಭೇದಿಸಿ ವಶಪಡಿಸಿಕೊಳ್ಳಲಾದ ಸ್ಪೋಟಕ ವಸ್ತುಗಳು ಮತ್ತು ರಾಸಾಯನಿಕಗಳ ಬೃಹತ್ ಸಂಗ್ರಹಗಳ ತನಿಖೆಯ ಸಮಯದಲ್ಲಿ ಸ್ಫೋಟ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ವಶಪಡಿಸಿಕೊಂಡ ವಸ್ತುಗಳನ್ನು ಪೊಲೀಸ್ ಠಾಣೆಯ ತೆರೆದ ಪ್ರದೇಶದಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು. ತನಿಖೆಯಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳು ಸಂಘಟಿತ ಮತ್ತು ವೈಜ್ಞಾನಿಕ ರೀತಿಯಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಮಾಣಿತ ಮತ್ತು ನಿಗದಿತ ಕಾರ್ಯವಿಧಾನದ ಭಾಗವಾಗಿ, ವಶಪಡಿಸಿಕೊಂಡ ರಾಸಾಯನಿಕ ಮತ್ತು ಸ್ಫೋಟಕ ಮಾದರಿಗಳನ್ನು ಹೆಚ್ಚಿನ ವಿಧಿವಿಜ್ಞಾನ ಮತ್ತು ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರು ಕಂದಾಯ ಅಧಿಕಾರಿಗಳು ಹಾಗೂ ಮೂವರು ನಾಗರಿಕರೂ ಇದ್ದಾರೆ. ಗಾಯಾಳುಗಳನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಪೊಲೀಸ್ ಠಾಣೆಯ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಠಾಣೆಯ ಸುತ್ತಲಿನ ಕಟ್ಟಡಗಳಿಗೂ ಹಾನಿಯಾಗಿದೆ. ಅಪಘಾತ ಪ್ರಕರಣವನ್ನ ತನಿಖೆ ಮಾಡಲಾಗುತ್ತಿದೆ. ಇದರ ಹೊರತಾಗಿ ಯಾವುದೇ ಊಹಾಪೋಹಗಳು ಅನಗತ್ಯ ಎಂದು ಗೃಹ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


