ಮೈಸೂರು: ಸ್ನಾನ ಮಾಡುವ ವೇಳೆ ಸಿಲಿಂಡರ್ ಲೀಕ್ ಆದ ಪರಿಣಾಮ ಉಸಿರುಗಟ್ಟಿ ಅಕ್ಕ-ತಂಗಿ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ. ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ಘಟನೆ ನಡೆದಿದ್ದು, ಬೆಟ್ಟದಪುರ ಗ್ರಾಮದ ಸಹೋದರಿಯರಾದ ಗುಲ್ಫರ್ಮ್ ತಾಜ್ (20) ಹಾಗೂ ಸಿಮ್ರಾನ್ ತಾಜ್ (23) ಮೃತ ಪಟ್ಟಿದ್ದಾರೆ..
ಗುಲ್ಫರ್ಮ್ ತಾಜ್ ಹಾಗೂ ಸಿಮ್ರಾನ್ ತಾಜ್ ಒಟ್ಟಿಗೆ ಸ್ನಾನ ಮಾಡಲೆಂದು ಹೋಗಿದ್ದಾರೆ. ಈ ವೇಳೆ ಬಾತ್ರೂಂನಲ್ಲಿದ್ದ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿದೆ. ಇದರ ಪರಿಣಾಮದಿಂದಾಗಿ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ನಾನದ ಕೋಣೆಗೆ ಹೋದವರು ಬಹಳ ಸಮಯವಾದರೂ ಹೊರಬಾರದ ಹಿನ್ನಲೆ ತಂದೆ ಅಲ್ತಾಫ್ ಬಾಗಿಲು ಬಡಿದಿದ್ದಾರೆ.
ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ಬಾಗಿಲು ಹೊಡೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿರವುದು ಬೆಳಕಿಗೆ ಬಂದಿದೆ. ಕೂಡಲೇ ಸಹೋದರಿಯರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಅಷ್ಟರಲ್ಲೇ ಇಬ್ಬರು ಪ್ರಾಣ ಬಿಟ್ಟಿದ್ದಾರೆ.. ಬಾತ್ರೂಂನಲ್ಲಿ ಕಿಟಕಿ ಇಲ್ಲದ ಹಿನ್ನಲೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.


