ಕಾಬೂಲ್: ಅಫ್ಘಾನಿಸ್ತಾನ ದೊಂದಿಗೆ ಇತ್ತೀಚಿನ ಸಂಘರ್ಷದ ಬಳಿಕ ಪಾಕಿಸ್ತಾನದ ದೇಶೀಯ ಮಾರುಕಟ್ಟೆ ತೀವ್ರ ಸಂಕಷ್ಟದಲ್ಲಿದೆ. ಟೊಮೆಟೊ ಬೆಲೆಗಳು ಗಗನಕ್ಕೇರಿದ್ದು, ಅಫ್ಘಾನಿಸ್ತಾನ ತನ್ನ ಗಡಿ ಮುಚ್ಚಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಶೇ.400ರಷ್ಟು ಏರಿಕೆ ಕಂಡಿದೆ. ಸ್ವಲ್ಪ ದಿನಗಳ ಹಿಂದೆ ಇದರ ಬೆಲೆ 100 ರೂ.ಗಳಿತ್ತು. ಈಗ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
2,600-ಕಿಮೀ ಗಡಿ ಹಂಚಿಕೊಂಡಿರುವ ಎರಡು ದೇಶಗಳ ಸೈನಿಕ ದಾಳಿ, ವೈಮಾನಿಕ ದಾಳಿಯ ಬಳಿಕ ಅಕ್ಟೋಬರ್ 11 ರಿಂದ ಎರಡೂ ದೇಶಗಳ ನಡುವಿನ ಗಡಿಗಳು ಮುಚ್ಚಲ್ಪಟ್ಟಿವೆ. ಕಾಬೂಲ್‌ನಲ್ಲಿ ನಡೆದ ಘರ್ಷಣೆಯ ನಂತರ ಎಲ್ಲಾ ವ್ಯಾಪಾರ ಮತ್ತು ಸಾರಿಗೆಯನ್ನು ನಿರ್ಬಂಧಿಸಲಾಗಿದೆ ಎಂದು ಕಾಬೂಲ್‌ನಲ್ಲಿರುವ ಪಾಕ್-ಅಫ್ಘಾನ್ ವಾಣಿಜ್ಯ ಮಂಡಳಿಯ ಮುಖ್ಯಸ್ಥ ಖಾನ್ ಜಾನ್ ಅಲೋಕೋಜಯ್ ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರತಿ ದಿನ ಕಳೆದಂತೆ, ಎರಡೂ ಕಡೆಯವರು ಸುಮಾರು $1 ಮಿಲಿಯನ್ ನಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು. ತಾಜಾ ಹಣ್ಣು, ತರಕಾರಿಗಳು, ಖನಿಜಗಳು, ಔಷಧ, ಗೋಧಿ, ಅಕ್ಕಿ, ಸಕ್ಕರೆ, ಮಾಂಸ ಮತ್ತು ಡೈರಿ ಉತ್ಪನ್ನಗಳು ಎರಡೂ ದೇಶಗಳ ನಡುವಿನ ವಾರ್ಷಿಕ $2.3 ಬಿಲಿಯನ್ ವ್ಯಾಪಾರದ ಪ್ರಮಾಣದಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ.
ಪಾಕಿಸ್ತಾನಿ ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಟೊಮೆಟೊ ಬೆಲೆಗಳು ಶೇ. 400 ಕ್ಕಿಂತಲೂ ಹೆಚ್ಚು ಏರಿಕೆಯಾಗಿ ಪ್ರತಿ ಕೆಜಿಗೆ ಸುಮಾರು 600 ಪಾಕಿಸ್ತಾನಿ ರೂಪಾಯಿಗಳಿಗೆ ($2.13) ತಲುಪಿದೆ. ಹೆಚ್ಚಾಗಿ ಅಫ್ಘಾನಿಸ್ತಾನದಿಂದ ಬರುವ ಸೇಬುಗಳ ಬೆಲೆಯೂ ಏರಿಕೆಯಾಗುತ್ತಿದೆ.
ನಮ್ಮಲ್ಲಿ ಪ್ರತಿದಿನ ರಫ್ತು ಮಾಡಲು ಸುಮಾರು 500 ಕಂಟೇನರ್ ತರಕಾರಿಗಳಿವೆ, ಅವೆಲ್ಲವೂ ಹಾಳಾಗಿವೆ ಎಂದು ಅಲೋಕೋಜೇ ಹೇಳಿದರು. ಗಡಿಯ ಎರಡೂ ಬದಿಗಳಲ್ಲಿ ಸುಮಾರು 5,000 ಕಂಟೇನರ್ ಸರಕುಗಳು ಸಿಲುಕಿಕೊಂಡಿವೆ. ಮಾರುಕಟ್ಟೆಯಲ್ಲಿ ಈಗಾಗಲೇ ಟೊಮೆಟೊ, ಸೇಬು ಮತ್ತು ದ್ರಾಕ್ಷಿಗಳ ಕೊರತೆ ಇದೆ ಎನ್ನಲಾಗಿದೆ.


