ನಟ ದುನಿಯಾ ವಿಜಯ್ ಮತ್ತು ಶ್ರೇಯಸ್ ಮಂಜು ಅಭಿನಯದ ಮಾರುತ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರಮಂದಿರಗಳ ಕೊರತೆಯಿಂದ ಮುಂದೂಡಲಾಗಿದೆ. ಅಕ್ಟೋಬರ್ 31 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವು ಈಗ ನವೆಂಬರ್ 21 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಈಶಾ ಪ್ರೊಡಕ್ಷನ್ಸ್ ಅಡಿಯಲ್ಲಿ ಕೆ ಮಂಜು ಮತ್ತು ರಮೇಶ್ ಯಾದವ್ ನಿರ್ಮಿಸಿರುವ ಈ ಚಿತ್ರಕ್ಕೆ ವ್ಯಾಪಕ ನಿರೀಕ್ಷೆ ವ್ಯಕ್ತವಾಗಿದೆ. ಚಿತ್ರ ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಪ್ರೇಕ್ಷಕರ ನಿರಂತರ ಬೆಂಬಲ ಮತ್ತು ತಾಳ್ಮೆಗೆ ಧನ್ಯವಾದಗಳನ್ನು ಅರ್ಪಿಸಿರುವ ಚಿತ್ರತಂಡ, ಅಧಿಕೃತ ಹೇಳಿಕೆಯ ಮೂಲಕ ಹೊಸ ದಿನಾಂಕವನ್ನು ಘೋಷಿಸಿದ್ದಾರೆ.
ಹೈ ಬಜೆಟ್ ಚಿತ್ರಕ್ಕೆ ಕಲಾ ಸಾಮ್ರಾಟ್ ಎಸ್ ನಾರಾಯಣ್ ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದಿದ್ದು, ನಿರ್ದೇಶನವನ್ನೂ ಮಾಡಿದ್ದಾರೆ. ಶ್ರೇಯಸ್ ಮಂಜುಗೆ ಬೃಂದಾ ಆಚಾರ್ಯ ಜೋಡಿಯಾಗಿದ್ದು, ಸಾಧು ಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ, ಚಿತ್ರಾ ಶೆಣೈ ಮತ್ತು ಸುಜಯ್ ಶಾಸ್ತ್ರಿ ಸೇರಿದಂತೆ ಇತರರು ನಟಿಸಿದ್ದಾರೆ. ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆ ಕುರಿತು ಜಾಗೃತಿ ಮೂಡಿಸುವ ಕಮರ್ಷಿಯಲ್ ಸಿನಿಮಾ ಇದಾಗಿದೆ. ಪೋಷಕರು ಯುವಜನತೆಯ ಮೇಲೆ ಹೆಚ್ಚು ಗಮನ ನೀಡಬೇಕು ಎಂಬ ಸಂದೇಶವಿದೆ ಎನ್ನುತ್ತಾರೆ ನಿರ್ದೇಶಕ ಎಸ್ ನಾರಾಯಣ್.


