ಬೆಂಗಳೂರು: ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಇನ್ಮುಂದೆ 33% ಅಂಕ ಪಡೆದರೆ ಉತ್ತೀರ್ಣ ಎಂದು ಘೋಷಿಸಲಾಗಿದೆ.. 2025-26ನೇ ಶೈಕ್ಷಣಿಕ ಸಾಲಿನಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಪಾಸಿಂಗ್ ಅಂಕಗಳನ್ನು ಕಡಿಮೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ..
ಇಷ್ಟು ವರ್ಷ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ 35% ಒಟ್ಟು ಅಂಕಗಳು ಪಾಸ್ ಆಗಲು ಕಡ್ಡಾಯವಾಗಿತ್ತು. ಆದರೆ, ಇದೀಗ ರಾಜ್ಯ ಸರ್ಕಾರವು ಈ ಪಾಸಿಂಗ್ ಅಂಕವನ್ನು 33%ಕ್ಕೆ ಇಳಿಸಿದೆ. ಎಸ್ಎಸ್ಎಲ್ಸಿಯಲ್ಲಿ ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು (ಅಂದರೆ 33%) ಗಳಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಆದರೆ, ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.
ಅದೇ ರೀತಿ, ದ್ವಿತೀಯ ಪಿಯುಸಿಯಲ್ಲಿ ಒಟ್ಟು 600 ಅಂಕಗಳಿಗೆ 198 ಅಂಕಗಳನ್ನು (33%) ಗಳಿಸಿದರೆ ಉತ್ತೀರ್ಣರಾಗಬಹುದು. ಇದರ ಜೊತೆಗೆ, ಪ್ರತಿ ವಿಷಯದಲ್ಲಿ ಲಿಖಿತ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಸೇರಿಸಿ ಕನಿಷ್ಠ 30 ಅಂಕಗಳನ್ನು ಪಡೆಯುವುದು ಅಗತ್ಯವಾಗಿದೆ. ಈ ಹೊಸ ನಿಯಮದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡ ಕಡಿಮೆಯಾಗಲಿದೆ. ಒಟ್ಟಾರೆ 33% ಸರಾಸರಿ ಇದ್ದರೆ ಮತ್ತು ಎಲ್ಲ ವಿಷಯಗಳಲ್ಲಿ ಕನಿಷ್ಠ 30 ಅಂಕಗಳು ಬಂದರೆ, ವಿದ್ಯಾರ್ಥಿಗಳು ಉತ್ತೀರ್ಣರಾಗಬಹುದು.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಿಂದ 33% ಅಂಕ ಪಡೆದರೆ ಎಸ್ಎಸ್ಎಲ್ಸಿ ಪಾಸ್ ಎಂದು ಘೋಷಿಸಲಾಗುವುದು. ಅಲ್ಲಿಗೆ 625ಕ್ಕೆ 206 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣ ಆಗಲಿದ್ದಾರೆ. ಆಂತರಿಕ ಅಂಕ, ಬಾಹ್ಯ ಅಂಕ ಎರಡು ಸೇರಿ 33% ಪಡೆಯಬೇಕಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ 3 ಪರೀಕ್ಷೆ ವ್ಯವಸ್ಥೆ ಜಾರಿ ಮಾಡಿದ್ದೇವೆ. ಪಾರದರ್ಶಕವಾಗಿ ಇರಲಿ ಅಂತ ವೆಬ್ ಕ್ಯಾಸ್ಟ್ ಮಾಡಿದ್ವಿ. ಪರೀಕ್ಷೆಗಳು ಉತ್ತಮವಾಗಿ ನಡೆದವು. ವೆಬ್ ಕ್ಯಾಸ್ಟಿಂಗ್ ನಿಂದ ಕಡಿಮೆ ಅಂಕ ಬಂದಾಗ ಶಿಕ್ಷಕರು ಜವಾಬ್ದಾರಿ ತಗೊಂಡು ಕೆಲಸ ಮಾಡಿದ್ರು. ವಿಶೇಷ ತರಗತಿ ಪಡೆದು ವಿದ್ಯಾರ್ಥಿಗಳನ್ನ ತಯಾರು ಮಾಡಿದ್ರು. ಆದ್ದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದು ಸಚಿವ ಮಧು ಬಂಗಾರಪ್ಪ ವಿವರಿಸಿದ್ರು.


