ಹಾಸನ: ಹಾಸನದ ಅಧಿದೇವತೆಯಾದ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಇಂದು ಮಧ್ಯಾಹ್ನ 12:12ಕ್ಕೆ ತೆರೆಯಲಾಗಿದೆ.. ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯುತ್ತದೆ. ಇದು ಭಕ್ತರಿಗೆ ಅಪೂರ್ವ ದರ್ಶನ ಸೌಭಾಗ್ಯ ನೀಡುತ್ತದೆ. ಆಶ್ವಿಜ ಮಾಸದ ಮೊದಲ ಗುರುವಾರದಂದು ಹಾಸನಾಂಬೆ ಗರ್ಭಗುಡಿ ತೆರೆಯಲಾಗಿದ್ದು, ಈ ಕಾರ್ಯಕ್ರಮ ಇಂದಿನಿಂದ 15 ದಿನಗಳ ಕಾಲ ನಡೆಯಲಿದೆ.
ಕಳೆದ ವರ್ಷ ಗರ್ಭಗುಡಿ ಬಾಗಿಲು ಮುಚ್ಚುವ ವೇಳೆ ಹಚ್ಚಿದ್ದ ದೀಪ ಉರಿಯುತ್ತಿತ್ತು. ದೇವರ ಮುಂದೆ ಇಟ್ಟಿದ್ದ ನೈವೇದ್ಯ ಹಳಸಿರಲಿಲ್ಲ ಮತ್ತು ಹೂವು ಬಾಡಿರಲಿಲ್ಲ.
ಇನ್ನು ಇಂದು ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆದಿದ್ದು, ಸಾರ್ವಜನಿಕರಿಗೆ ನಾಳೆಯಿಂದಲೇ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅಕ್ಟೋಬರ್ 22ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಉತ್ಸವವು ಹಾಸನ ಜಾತ್ರೆಯ ಭಾಗವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.
ಕಳೆದ ವರ್ಷ ಅಕ್ಟೋಬರ್ 24 ರಿಂದ ನವೆಂಬರ್ 3ರವರೆಗೆ ಹಾಸನಾಂಬೆ ಜಾತ್ರೋತ್ಸವ ನಡೆದಿತ್ತು. ಈ ವೇಳೆ 20 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದರು. ಈ ಬಾರಿ 25 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಜಾತ್ರೋತ್ಸವದಲ್ಲಿ ಹೆಲಿ ಟೂರಿಸಂ, ಟೂರ್ ಪ್ಯಾಕೇಜ್, ಶ್ವಾನ ಪ್ರದರ್ಶನ, ಪಾಕ ಸ್ಪರ್ಧೆ, ಜಾನಪದ ಉತ್ಸವ ಸೇರಿದಂತೆ ಹಲವು ಆಕರ್ಷಣೆಯಿರಲಿದೆ.


