ಹುಬ್ಬಳ್ಳಿ : ಅನಂತಕುಮಾರ ಹೆಗಡೆ ಲಕ್ಷ್ಮಣ ರೇಖೆ ಮೀರಿ ಮಾತನಾಡಿದರೇ ಅದನ್ನು ಯಾರು ಒಪ್ಪಿಕೊಳ್ಳುವುದಿಲ್ಲ. ಮೂರ್ನಾಲ್ಕು ವರ್ಷ ಹೆಗಡೆ ಎಲ್ಲಿದ್ರೂ…? ಅವರ ಹೇಳಿಕೆಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಜಗದೀಶ ಶೆಟ್ಟರ್ ಕಿಡಿಕಾರಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಗೆ ಅದರದೇ ಆದ ಗೌರವವಿದೆ. ಅನಂತಕುಮಾರವರು ಒಬ್ಬ ಜನಪ್ರತಿನಿಧಿಯಾಗಿ ಸಿಎಂ ಹುದ್ದೆಯಲ್ಲಿವರನ್ನು ಮಗನೆ ಎಂದು ಹೇಳಿದ್ದಾರೆ. ಇದೂ ಎಷ್ಟರಮಟ್ಟಿಗೆ ಸರಿಎನ್ನುವುದು ಅವರೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಕುಟುಕಿದರು.
ಜೊತೆಗೆ ರಾಮಮಂದಿರ ವಿಷಯವನ್ನು ಬಿಜೆಪಿಯವರು ಲೋಕಸಭಾ ಚುನಾವಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಭಾವನಾತ್ಮಕ ವಿಷಯಗಳು ರಾಜಕಾರಣದಲ್ಲಿ ಬಹಳ ದಿನ ನಡೆಯೋದಿಲ್ಲ. ಧರ್ಮದಲ್ಲಿ ರಾಜಕಾರಣ ಆಗಬಾರದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕೆಂಬುದು ಎಲ್ಲರ ಅಭಿಲಾಷೆ ಆಗಿತ್ತು. ಅದರಂತೆ ಸುಪ್ರೀಂ ಕೋರ್ಟ್ ಜನರ ಬೇಡಿಕೆಗೆ ಬೆಲೆ ಕೊಟ್ಟಿದೆ. ಇದೀಗ ಮಂದಿರ ನಿರ್ಮಾಣ ಆಗುತ್ತಿರುವುದು ಎಲ್ಲರಿಗೂ ಖುಷಿಯ ಸಂಗತಿ. ರಾಮಮಂದಿರ ಟ್ರಸ್ಟ್’ನ ಸದಸ್ಯರು ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಹ್ವಾನ ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಕೊಟ್ಟಿಲ್ಲ. ಹಾಗಂತ ಕಾಂಗ್ರೆಸ್ ನಾಯಕರು ಮಂದಿರ ಉದ್ಘಾಟನೆಗೆ ಹೋಗಬೇಡಿ ಎಂದು ಎಲ್ಲಿಯೂ ಹೇಳಿಲ್ಲ, ಬಹಿಷ್ಕಾರ ಹಾಕಿಲ್ಲ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು.
ಬಿಜೆಪಿಯವರಿಗೆ ರಾಮಮಂದಿರ ನಿರ್ಮಾಣ ಮಾಡುವ ಇಚ್ಛೆ ಇದೆಯೋ? ಅಥವಾ ರಾಮಮಂದಿರ ಹೆಸರಿನಲ್ಲಿ ಕಾಂಗ್ರೆಸ್ ಅವರನ್ನು ಟೀಕೆ ಮಾಡಿ ರಾಜಕಾರಣ ಮಾಡುವುದು ಇದೆಯೋ ಎಂಬುದನ್ನು ಅವರೇ ಹೇಳಬೇಕು. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ರಾಮಭಕ್ತರು ಇದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಆಗಿದ್ದರೇ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿರಲಿಲ್ಲ. ಇದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ನೀಡಿದ ಅವರು, ಶೆಟ್ಟರ್ ಪುನಃ ಬಿಜೆಪಿ ಸೇರತ್ತಾರೆಂಬ ಹೇಳಿಕೆಗೆ, ಅಲ್ಲಿರುವ ಕಾರ್ಯಕರ್ತರು, ನಾಯಕರು ನನಗೆ ಅನ್ಯಾಯ ಆಗಿದೆ ಎಂಬ ಭಾವನೆ ಅವರಿಗಿದೆ. ಹೀಗಾಗಿ ಆ ರೀತಿಯ ಮಾತುಗಳು ಬರತ್ತಾ ಇವೆ. ಅಪಮಾನ ಆಗಿ ಹೊರಗಡೆ ಬಂದಿದ್ದೇನೆ. ಮತ್ತೆ ಪುನಃ ಬಿಜೆಪಿಗೆ ವಾಪಾಸ್ ಹೋಗುವ ಪ್ರಶ್ನೆ ಇಲ್ಲ. ಈ ಬಗ್ಗೆ ಯಾವುದೇ ಚರ್ಚೆ ನಾಯಕರೊಂದಿಗೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.