ನಾಡ ಹಬ್ಬ ಮೈಸೂರು ದಸರಾ ಹಬ್ಬದ ಪ್ರಯುಕ್ತ ಸಾರಿಗೆ ಇಲಾಖೆ ಮೈಸೂರಿಗೆ ಹೆಚ್ಚುವರಿ ಬಸ್ ಗಳನ್ನು ಬಿಡಲಾಗಿದೆ.. ರಾಜ್ಯದಾದ್ಯಂತ ಜನರು ಮೈಸೂರು ದಸರಾಗೆ ಆಗಮಿಸುವ ಹಿನ್ನೆಲೆ ಪ್ರಯಾಣಿಕರ ಬೇಡಿಕೆಯಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಚ್ಚುವರಿ ಬಸ್ ಸೌಲಭ್ಯಗಳನ್ನು ಜನರಿಗೆ ಒದಗಿಸಿದೆ. ಮುಂದಿನ 10 ದಿನಗಳವರೆಗೆ ಈ ವಿಶೇಷ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ವಾಹನಗಳಿಗೆ ಪೂಜೆ ಸಲ್ಲಿಸಿ ದಸರಾ ವಿಶೇಷ ಬಸ್‌ಗಳಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ಪ್ರವಾಸಿಗರಿಗೆ ಸುಲಭವಾಗಿ ದಸರಾ ಮಹೋತ್ಸವವನ್ನು ಆನಂದಿಸುವ ಅವಕಾಶ ಒದಗಿಸಲಾಗುತ್ತಿದೆ.
ಮೈಸೂರು ದಸರಾ-2025 ಮಹೋತ್ಸವವು ಸೆಪ್ಟೆಂಬರ್ 22ರಿಂದ ಆರಂಭವಾಗಿ 11 ದಿನಗಳ ಕಾಲ ನಡೆಯಲಿದ್ದು, ಈ ಬಾರಿ ಪಂಚಮಿ ತಿಥಿ ಎರಡು ದಿನಗಳಿರುವುದರಿಂದ 11 ದಿನಗಳ ಆಚರಣೆಯಾಗಿದ್ದು, ಗಜಪಯಣ, ಜಂಬೂ ಸವಾರಿ, ದಸರಾ ಉದ್ಘಾಟನೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಚಾರವೂ ಈ ಸಂದರ್ಭದಲ್ಲಿ ನಡೆಯಲಿದ್ದು, 40 ಕೋಟಿಗೂ ಹೆಚ್ಚು ಅನುದಾನದೊಂದಿಗೆ ಅದ್ಧೂರಿ ಆಚರಣೆಗೆ ತಯಾರಿ ನಡೆದಿದೆ. ದೇಶ-ವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಸಾರಿಗೆ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ.
ರಾಜ್ಯಾದ್ಯಂತ 2,300ಕ್ಕೂ ಹೆಚ್ಚು ವಿಶೇಷ ಬಸ್ ಸೌಲಭ್ಯಗಳನ್ನು ಕೆಎಸ್‌ಆರ್‌ಟಿಸಿ ಒದಗಿಸಿದ್ದು, ಇದರಲ್ಲಿ ಮೈಸೂರು-ಬೆಂಗಳೂರು ಮಾರ್ಗಕ್ಕೆ 260 ಹೆಚ್ಚುವರಿ ಬಸ್‌ಗಳು ಸೇರಿವೆ. ಚಾಮುಂಡಿ ಬೆಟ್ಟ, ಬೃಂದಾವನ ಉದ್ಯಾನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ ಮುಂತಾದ ಪ್ರವಾಸಿ ತಾಣಗಳಿಗೆ 350 ಹೆಚ್ಚುವರಿ ಬಸ್‌ಗಳು ಸೇವೆ ನೀಡಲಿವೆ. ಒಟ್ಟು 610 ವಿಶೇಷ ಬಸ್‌ಗಳು ಮೈಸೂರು ಪ್ರದೇಶದಲ್ಲಿ ಕಾರ್ಯಾಚರಣೆ ಮಾಡಲಿವೆ. ಹೈದರಾಬಾದ್, ಚೆನ್ನೈ, ಪುಣ್ಯ, ಪಣಜಿ ಸೇರಿದಂತೆ ಅಂತರರಾಜ್ಯ ಮಾರ್ಗಗಳಿಗೂ ಸೌಲಭ್ಯಗಳಿವೆ.


