ಬೆಂಗಳೂರು: ಪೂಜೆ ಮಾಡಿದ್ದ ದೇವಸ್ಥಾನದಲ್ಲೇ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರ್ಚಕ ಪ್ರವೀಣ್ ಭಟ್ ಮತ್ತು ಸಂತೋಷ್ ಇಬ್ಬರು ಬಂಧಿತರು. ಬೆಳಗಿನ ಜಾವ ದೇವಾಲಯಗಳಲ್ಲಿ ಪೂಜೆ ಮಾಡಿ, ರಾತ್ರಿಯಾದರೆ ಅದೇ ದೇವಾಲಯದ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ.
ಅರ್ಚಕನ ಗೌರವಾನ್ವಿತ ಸ್ಥಾನದಿಂದಾಗಿ ಈ ವಸ್ತುಗಳನ್ನು ಖರೀದಿಸುವವರು ಯಾವುದೇ ಅನುಮಾನ ಪಡದೆ ಒಪ್ಪಿಕೊಳ್ಳುತ್ತಿದ್ದರು. ಮನೆಯಲ್ಲಿ ಕಷ್ಟವಿದೆ, ಇಂತಹ ವಸ್ತುಗಳು ಮನೆಯಲ್ಲಿ ತುಂಬಿವೆ ಎಂದು ಪ್ರವೀಣ್ ತನ್ನ ಕೃತ್ಯಕ್ಕೆ ಸಮರ್ಥನೆ ನೀಡುತ್ತಿದ್ದ.
ಆದರೆ, ಒಂದು ದಿನ ಕಳ್ಳತನದ ಪ್ರಕರಣದಲ್ಲಿ ಸಿಕ್ಕಿಬಿದ್ದ ಈತ ಜೈಲಿಗೆ ಸೇರಿದ. ಜೈಲಿನಲ್ಲಿ ಈತನಿಗೆ ಸಂತೋಷ್ ಎಂಬಾತನ ಪರಿಚಯವಾಯಿತು. ಇಬ್ಬರೂ ಜೈಲಿನಿಂದ ಬಿಡುಗಡೆಯಾದ ನಂತರ ಕಳ್ಳತನದ ಪಾಲುದಾರಿಕೆ ಆರಂಭಿಸಿದರು. ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಾದ ಬನಶಂಕರಿ ದೇವಾಲಯ ಮತ್ತು ಇತರ ಕಡೆಗಳಿಗೆ ಕನ್ನ ಹಾಕಿದರು.
ಜೈಲಿನಲ್ಲಿ ಪರಿಚಯವಾದ ಸಂತೋಷ್ ನ ಸಹವಾಸದಿಂದ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಿಗೂ ಕನ್ನ ಹಾಕಿ ಸದ್ಯ ಪೋಲಿಸರ ಅತಿಥಿಯಾಗಿದ್ದಾರೆ.
ಇನ್ನೂ ಕದ್ದ ಸಾಮಾಗ್ರಿಗಳನ್ನು ಅಂಗಡಿಗೆ ಮಾರಾಟ ಮಾಡಿದರೆ, ಮತ್ತೊಮ್ಮೆ ಆ ಕಡೆ ಅಂಗಡಿಗೆ ಹೋಗುತ್ತಿರಲಿಲ್ಲ. ಪಕ್ಕಾ ಪ್ಲ್ಯಾನ್ ಮಾಡಿಯೇ ಸ್ಕೆಚ್ ಹಾಕುತ್ತಿದ್ದರು. ಹೀಗೆ ಬಂಧಿತರಿಂದ 14 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


