ವಾರಾಂತ್ಯ ಬಂತೆಂದರೆ ಸಾಕು ಬೆಂಗಳೂರಿನ ಹೆಚ್ಚಿನವರು ಭೇಟಿ ನೀಡುವ ಹೆಚ್ಚಿನ ತಾಣ ಚಿಕ್ಕಬಳ್ಳಾಪುರದಲ್ಲಿರುವ ಪ್ರವಾಸಿತಾಣ ನಂದಿಗಿರಿಧಾಮ. ಆದ್ರೆ ಇದೀಗ ನಂದಿ ಗಿರಿಧಾಮಕ್ಕೆ ಮುಂಜಾನೆ ಅಥವಾ ಸಂಜೆ ವೇಳೆ ಹೋಗುವವರಿಗೆ ಭಯದ ವಾತಾವರಣ ಉಂಟಾಗಿದೆ.ಬೆಟ್ಟದ ಕ್ರಾಸ್ ನಿಂದ ಚಿಕ್ಕಬಳ್ಳಾಪುರದ ಕಡೆ ಬರುವ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಇತ್ತೀಚಿಗೆ ಚಿರತೆ ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಯಾಗಿದೆ.
ಚಿಕ್ಕಬಳ್ಳಾಪುರದ ನಿವಾಸಿಯೊಬ್ಬರು ನಂದಿಗಿರಿಧಾಮಕ್ಕೆ ಹೋಗಿ ವಾಪಸ್ ಬರುವಾಗ ಅವರ ಕಾರಿಗೆ ಚಿರತೆ ಅಡ್ಡ ಬಂದಿದೆ.ಚಿರತೆ ಹಾವಳಿ ಹೆಚ್ಚಾಗಿರುವುದರಿಂದ ಚಿಕ್ಕಬಳ್ಳಾಪುರ ನಂದಿಗಿರಿಧಾಮದ ರಸ್ತೆಯಲ್ಲಿ ರಾತ್ರಿಯಾದರೆ ಬೈಕ್ ಸವಾರರು ರಸ್ತೆಯಲ್ಲಿ ಸಂಚಾರ ಮಾಡುವುದನ್ನೇ ಬಿಟ್ಟಿದ್ದಾರೆ. ರಾತ್ರಿಯಾದರೆ ಸಾಕು ಚಿರತೆ ಭೀತಿ ಭಯ ಕಾಡುತ್ತಿದೆ ಎಂದು ಸ್ಥಳೀಯ ನಿವಾಸಿ ವೆಂಕಟೇಶ ಎಂಬವರು ತಿಳಿಸಿದ್ದಾರೆ. ಇತ್ತೀಚಿಗೆ ಚಿಕ್ಕಬಳ್ಳಾಪುರ ತಾಲೂಕಿನ ವರ್ಲಕೊಂಡ ಬೆಟ್ಟದ ಬಳಿ ಚಿರತೆಗಳ ಹಿಂಡು ಪತ್ಯಕ್ಷವಾಗಿದ್ದು, ರೈತರನ ಮೇಲೆ ದಾಳಿ ಮಾಡಿದೆ.
ಈಗ ನಂದಿಗಿರಿಧಾದ ಸುತ್ತಮುತ್ತ ಚಿರತೆಗಳು ಗಿರಕಿ ಹೊಡೆಯುತ್ತಿವೆ.ಅಲ್ಲಲ್ಲಿ ಸ್ಥಳೀಯರ ಕಣ್ಣಿಗೆ ಕಾಣಿಸುತ್ತಿವೆ.ಚಿಕ್ಕಬಳ್ಳಾಪುರ ತಾಲೂಕಿನ ಅಂಗಟ್ಟ, ಈರೇನಹಳ್ಳಿ ಸೇರಿದಂತೆ ಮೊಕ್ಷಗುಂಡಂ ಸರ್ ಎಂ.ವಿಶ್ವೇಶ್ವರಯ್ಯ ಮಾಸ್ಟರ್ ತರಬೇತಿ ಕೇಂದ್ರದ ಸುತ್ತಮುತ್ತ ಚಿರತೆಗಳು ಪತ್ತೆಯಾಗಿವೆ. ಇದರಿಂದ ಸ್ಥಳೀಯರು ಸಂಜೆಯಾದ ನಂತರ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.ಚಿರತೆಗಳನ್ನು ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.