ಬೆಂಗಳೂರು : ಧರ್ಮಸ್ಥಳ ವಿರುದ್ಧ ಷಡ್ಯಂತ್ರ, ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಚಲೋ ಧರ್ಮಸ್ಥಳ ಯಾತ್ರೆಯನ್ನು ಹಮ್ಮಿಕೊಂಡು, ಧರ್ಮಸ್ಥಳದಲ್ಲಿ ಕಾರ್ಯಮವನ್ನ ಕೂಡ ಆಯೋಜನೆ ಮಾಡಿತ್ತು.. ಇದೀಗ ಬಿಜೆಪಿ ಪಕ್ಷದಲ್ಲೇ ಧರ್ಮಸ್ಥಳ ಚಲೋ ವಿಚಾರಕ್ಕೆ ಭಿನ್ನಮತ ವ್ಯಕ್ತವಾಗಿದೆ..
ಧರ್ಮಸ್ಥಳದಲ್ಲಿ ಚಲೋ ಸಮಾವೇಶ ಹಮ್ಮಿಕೊಂಡಿದ್ದ ಬಿಜೆಪಿ ಸಭೆ ಮುಗಿದ ಬಳಿಕ ಬಿ.ವೈ ವಿಜಯೇಂದ್ರ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸೌಜನ್ಯ ನಿವಾಸಕ್ಕೆ ಭೇಟಿ ನೀಡಿ, ಸೌಜನ್ಯ ತಾಯಿ ಕುಸುಮಾವತಿ ಅವರ ಜೊತೆ ಮಾತುಕತೆ ನಡೆಸಿದ್ದರು. ಮಾತುಕತೆ ಮಾಡಿ ಸೌಜನ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾದರೆ ಅಗತ್ಯ ಕಾನೂನು ನೆರವು ನೀಡುವ ಭರವಸೆಯನ್ನೂ ನೀಡಿ ಬಂದಿದ್ದರು. ಆದರೆ, ಸೌಜನ್ಯ ನಿವಾಸಕ್ಕೆ ಭೇಟಿ ನೀಡಿದ್ದು ಈಗ ಬಿಜೆಪಿಯೊಳಗೇ ಆಕ್ಷೇಪಕ್ಕೆ ಕಾರಣವಾಗಿದೆ.
ಪಕ್ಷದಲ್ಲಿ ಮೊದಲೇ ಚರ್ಚೆ ನಡೆಸದೇ ಏಕಾಏಕಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಿರ್ಧಾರ ತೆಗೆದುಕೊಂಡರು ಎಂಬ ಅಸಮಾಧಾನದೊಂದಿಗೇ ಬಿಜೆಪಿ ನಾಯಕರು ಧರ್ಮಸ್ಥಳದಿಂದ ಬೆಂಗಳೂರಿಗೆ ವಾಪಸಾಗಿದ್ದರೆ, ಧಾರ್ಮಿಕ ಕೇಂದ್ರದ ಪರವಾಗಿ ಸಮಾವೇಶ ನಡೆಸಿ ನಂತರ ಸೌಜನ್ಯ ನಿವಾಸಕ್ಕೆ ಭೇಟಿ ನೀಡಬೇಕಾದ ಅವಶ್ಯಕತೆ ಏನಿತ್ತು ಎಂಬ ಆಕ್ಷೇಪವನ್ನೂ ಆಂತರಿಕವಾಗಿ ಕೆಲವು ಮಂದಿ ಬಿಜೆಪಿ ನಾಯಕರು ಎತ್ತಿದ್ದಾರೆ.