ಉತ್ತರ ಕನ್ನಡ: ನೇತ್ರಾಣಿ ದ್ವೀಪದ ಸಮೀಪ ಭಾರಿ ಅಲೆಗಳ ಅಬ್ಬರಕ್ಕೆ ಮೀನುಗಾರಿಕಾ ಬೋಟೊಂದು ಮುಗುಚಿದ ಘಟನೆ ಬೋಟ್ ನಲ್ಲಿದ್ದ ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದು, ಎಲ್ಲಾ ಮೀನುಗಾರರನ್ನು ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ದ್ವೀಪದ ಬಳಿ ಸಂಭವಿಸಿದೆ.
ಮಹಾಮುರ್ಡೇಶ್ವರ ಎನ್ನುವ ಬೋಟ್ ಮೀನುಗಾರಿಕೆಗೆ ತೆರಳಿದ್ದ ಸಮಯದಲ್ಲಿ ಮುಡರ್ಡಶ್ವರದಿಂದ ಹೊರಕ್ಕೆ ಅರಬ್ಬೀ ಸಮುದ್ರದಲ್ಲಿ ನೇತ್ರಾಣಿ ಸಮೀಪ ಅಬ್ಬರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿದೆ.
ಬೋಟ್ ಮಗುಚಿದ್ದ ಪರಿಣಾಮ ಬೋಟಿನಲ್ಲಿದ್ದ ಮೀನುಗಾರರು ಸೇರಿದಂತೆ ಮೀನುಗಾರಿಕಾ ಬಲೆ ಹಾಗೂ ಇತರ ಸಾಮಗ್ರಿಗಳೂ ಕೂಡಾ ನೀರುಪಾಲಾಗಿದೆ
ಬೋಟ್ ಮುಳುಗಿದ ತಕ್ಷಣ ಕರಾವಳಿ ಕಾವಲುಪಡೆಗೆ ಕರೆ ಮಾಡಿದ್ದು, ಅವರ ಮಾರ್ಗದರ್ಶನದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಇತರ ಬೋಟುಗಳು ಸಹಾಯಕ್ಕೆ ಧಾವಿಸಿದ್ದು,ನೀರಿನಲ್ಲಿ ಬಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಎಲ್ಲಾ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೋಟು ಕಾಯ್ಕಿಣಿಯ ಅಪ್ಪಣ್ಣ ಮೊಗೇರ ಎನ್ನುವವರಿಗೆ ಸೇರಿದ್ದಾಗಿದ್ದು, ಮುಳುಗಡೆಯಿಂದ ಲಕ್ಷಾಂತರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.