ಚಿಕ್ಕಬಳ್ಳಾಪುರ: ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡು 150 ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು, ಮೃತ ಹಂದಿಗಳನ್ನು ದಂಡುಪಾಳ್ಯ ಕೆರೆಗೆ ಬೀಸಾಡಿರುವ ಘಟನೆ ಚಿಂತಾಮಣಿ ತಾಲೂಕು ಹೆಬ್ಬರಿ ಗ್ರಾಮದ ಬಳಿ ನಡೆದಿದೆ.
ಲಾಯರ್ ವೆಂಕಟರೆಡ್ಡಿ ಎಂಬುವವರಿಗೆ ಸೇರಿದ ಹಂದಿ ಸಾಕಾಣಿಕೆ ಪಾರ್ಮ್ ನಲ್ಲಿ 200 ಹಂದಿಗಳನ್ನು ಸಾಕಾಣಿಕೆ ಮಾಡಿದ್ದು, ಇತ್ತಿಚ್ಚಿಗೆ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡು 150 ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಮೃತ ಹಂದಿಗಳನ್ನು ದಂಡುಪಾಳ್ಯ ಕೆರೆಗೆ ಬೀಸಾಡಿರುವುದರಿಂದ ಕೆರೆಯ ನೀರೆಲ್ಲಾ ಮಾಲಿನ್ಯವಾಗಿ ಈ ಭಾಗದ ಜನರು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯ ಜೊತೆಗೆ ಹಂದಿಜ್ವರ ಹರಡುವ ಭೀತಿಯಲ್ಲಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಹಾಗೂ ಚಿಂತಾಮಣಿ ತಾಲೂಕು ಆಡಳಿತ ಆಲರ್ಟ್ ಆಗಿದೆ.
ದಂಡು ಪಾಳ್ಯ ಕೆರೆ ಸ್ಥಳಕ್ಕೆ ತಹಶೀಲ್ದಾರ್ ಸುದರ್ಶನ್ ಯಾದವ್ , ಇಓ ಆನಂದ್, ಜಿಲ್ಲಾ ಪಶುಪಾಲನಾ ಅಧಿಕಾರಿ ರಂಗಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್,ತಾಲೂಕು ಆರೋಗ್ಯಾಧಿಕಾರಿ ರಾಮಚಂದ್ರಾರೆಡ್ಡಿ , ಡಿವೈಎಸ್‌ಪಿ ಮುರಳಿಧರ್, ಪಿಡಿಓ ಶಿವಣ್ಣ ಮತ್ತಿತರ ಅಧಿಕಾರಿಗಳು ಕೆರೆಯಲ್ಲಿ ಬೀಸಾಡಿರುವ ಸತ್ತ ಹಂದಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವು ಮಾಡಿಸಿದ್ದಾರೆ..
ಇನ್ನು ಆಫ್ರಿಕನ್ ಹಂದಿ ಜ್ವರದಿಂದ ಮನುಷ್ಯರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪಶು ಅಧಿಕಾರಿಗಳು ಮಾಹಿತಿ ನೀಡಿದ್ದು, ಫಾರಂನಲ್ಲಿ ಉಳಿದ ಹಂದಿಗಳನ್ನ ಕೊಲ್ಲೋಕೆ ತೀರ್ಮಾನಿಸಲಾಗಿದೆ.