ಗೂಗಲ್ ಮ್ಯಾಪ್ ಸರ್ವೇ ತಂಡವನ್ನು ಕಳ್ಳರ ತಂಡ ಎಂದು ತಪ್ಪಾಗಿ ಭಾವಿಸಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ರಾತ್ರಿ ವೇಳೆ ಕ್ಯಾಮೆರಾ ಅಳವಡಿಸಿ ವಾಹನವನ್ನು ಬಳಸಿಕೊಂಡು ಸ್ಥಳೀಯ ಬೀದಿಗಳನ್ನು ಮ್ಯಾಪಿಂಗ್ ಮಾಡುತ್ತಿದ್ದಾಗ ಘಟನೆ ನಡೆದಿದೆ..
ಇತ್ತೀಚಿಗೆ ಸಾಧ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಘಟನೆಗಳಿಂದ ಜನರು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಶಹಪುರ್ ಉಮ್ರಾ ಗ್ರಾಮದಲ್ಲಿ ಒಂಬತ್ತು ತಿಂಗಳ ಶಿಶುವಿನ ಹಣೆಗೆ ಬಂದೂಕಿಟ್ಟು, ದರೋಡೆ ಮಾಡಿದ ಪ್ರಕರಣವೂ ವರದಿಯಾಗಿದೆ. ತಡರಾತ್ರಿ ಕಾರುಗಳಲ್ಲಿ ಬರುವ ವ್ಯಕ್ತಿಗಳು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಗ್ರಾಮಸ್ಥರಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದೆ. ಹೀಗಾಗಿ ಸ್ಥಳೀಯರು ಈ ಪ್ರದೇಶಕ್ಕೆ ಪ್ರವೇಶಿಸುವ ಪರಿಚಯವಿಲ್ಲದ ವಾಹನಗಳ ಮೇಲೆ ನಿಗಾ ಇಡುತ್ತಿದ್ದಾರೆ..
ಗುರುವಾರ, ಗೂಗಲ್‌ನ ಸ್ಟ್ರೀಟ್ ವ್ಯೂ ಮ್ಯಾಪಿಂಗ್ ಕಾರು, 360 ಡಿಗ್ರಿ ಕ್ಯಾಮೆರಾ ಹೊತ್ತು ಹಾದುಹೋದಾಗ, ಊರಿಗೆ ಕಳ್ಳರು ಬಂದಿದ್ದಾರೆಂಬ ವದಂತಿ ಶರವೇಗದಲ್ಲಿ ಹಬ್ಬಿತ್ತು. ಇದಾದ ನಂತರ, ಗ್ರಾಮಸ್ಥರು ಕಾರನ್ನು ಎಲ್ಲಾ ಕಡೆಯಿಂದ ಸುತ್ತುವರೆದು ಗದ್ದಲ ಸೃಷ್ಟಿಸಲು ಪ್ರಾರಂಭಿಸಿದರು. ಕಾರನ್ನು ನಿಲ್ಲಿಸಲು ಅವರು ರಸ್ತೆಯ ಮೇಲೆ ಮರದ ದಿಮ್ಮಿಗಳನ್ನು ಹಾಕಿದರು.
ಕಾರಿನಲ್ಲಿದ್ದ ಸಿಬ್ಬಂದಿ ಭಯಭೀತರಾಗಿದ್ದರು. ಅವರು ತಕ್ಷಣ ಪೊಲೀಸರಿಗೆ ಕರೆ ಮಾಡಿದರು. ಮಾಹಿತಿಯ ಮೇರೆಗೆ ಪೊಲೀಸರು ಆಗಮಿಸಿ ಜನರಿಗೆ ವಿವರಿಸಿದರು. ಗ್ರಾಮಸ್ಥರಿಗೆ ವಿವರಿಸಿದ ನಂತರ ಕಾರನ್ನು ಸುರಕ್ಷಿತವಾಗಿ ಕಳುಹಿಸಲಾಯಿತು ಎಂದು ಇನ್ಸ್‌ಪೆಕ್ಟರ್ ಹೇಳಿದರು.
ಪೊಲೀಸರು ಗ್ರಾಮಸ್ಥರು ಮತ್ತು ಸಮೀಕ್ಷಾ ತಂಡವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ಘಟನೆ ತಪ್ಪು ತಿಳುವಳಿಕೆಯಿಂದ ಉಂಟಾಗಿದೆ. ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳು ನೀಡಿದ ಮಾನ್ಯ ಪರವಾನಗಿಗಳೊಂದಿಗೆ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಸರ್ವೇ ತಂಡ ಸ್ಪಷ್ಟಪಡಿಸಿದರು.